ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಲೂಟಿ ಜಾತ್ರೆಯಾಗುತ್ತಿವೆ ಎಂದು ಜೆಡಿಎಸ್ ಶಾಸಕ ಹೆಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಇಂದು ಟೀಕಿಸಿದರು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಚಾರಕ್ಕಾಗಿ ಜಾಹೀರಾತು ನೀಡಿದ 140 ಕೋಟಿ ರೂ. ಬಿಡುಗಡೆಯಾಗಿಲ್ಲ ಎಂಬ ಪತ್ರ ಬರೆದಿರುವುದೂ ಇದೆ. ಪಾಲಿಸಿ ಫ್ರಂಟ್ ಎಂಬ ಸಂಸ್ಥೆಗೆ 7.20 ಕೋಟಿ ರೂ. ಮೊತ್ತವನ್ನು ತೆರಿಗೆ ವಿನಾಯಿತಿ ನೀಡಿ ಶರವೇಗದಲ್ಲಿ ಹಣ ಬಿಡುಗಡೆ ಮಾಡಲಾಗಿದೆ. ಆ ಸಂಸ್ಥೆಗೆ ಅಪ್ಪ, ಅಮ್ಮ ಇಲ್ಲ. ಅದರ ಮೂಲ ಪತ್ತೆಯಾಗಿಲ್ಲ. ರಾಕೆಟ್ ವೇಗದಲ್ಲಿ ಹಣ ಬಿಡುಗಡೆಯಾಗಿದ್ದು, ಯಾವ ರೀತಿ ಕೆಲಸ ಮಾಡುತ್ತಿದೆ ಎಂದು ಗೊತ್ತಿಲ್ಲ. ಅದು ಪಟ್ಟೊ, ಮೊಟ್ಟೊ, ರಟ್ಟೊ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಕಚೇರಿಯಿಂದ ಜಾಹೀರಾತು ನೀಡಿ ಭ್ರಷ್ಟಾಚಾರದ ರೇಟ್ ಕಾರ್ಡ್ ಬಿಡುಗಡೆ ಮಾಡಲಾಗಿತ್ತು. ಈಗ ಅಧಿಕಾರಕ್ಕೆ ಬಂದ ಮೇಲೆ ಪರ್ಸಂಟೇಜ್ ನಿಲ್ಲಿಸಿದ್ದೀರಾ, ಇಲ್ಲವೇ ಜಾಸ್ತಿ ಮಾಡಿದ್ದೀರಾ ಅಥವಾ ಕಡಿಮೆ ಮಾಡಿದ್ದೀರಾ ಎಂಬುದನ್ನು ಹೇಳಬೇಕು. 250 ಲಕ್ಷ ಕೋಟಿ ರೂ. ಜಿಡಿಪಿಯಲ್ಲಿ 25 ಲಕ್ಷ ಕೋಟಿ ರೂ. ಕಪ್ಪು ಹಣವಿದೆ ಎಂದು ವೈದ್ಯನಾಥನ್ ಎಂಬವರು ಭ್ರಷ್ಟಾಚಾರದ ಬಗ್ಗೆ ಪುಸ್ತಕ ಬರೆದಿದ್ದಾರೆ. ಹೀಗಾಗಿ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡುವುದರಲ್ಲಿ ಉಪಯೋಗವಿಲ್ಲ ಎಂದರು.
ಮಧ್ಯವರ್ತಿಗಳಿಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದರು. ಗದಗದಲ್ಲಿ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರಳು ದಂಧೆ ವಿರುದ್ಧ ಪತ್ರ ಬರೆದಿದ್ದಕ್ಕೆ ಆ ರೀತಿಯಾಗಿದೆ ಎಂಬ ಮಾಹಿತಿ ಇದೆ. ಸರ್ಕಾರದ ಪರಿಶುದ್ಧ ಆಡಳಿತ ಹೇಗಿದೆಯೆಂದರೆ ನಗರೋತ್ಥಾನ ಯೋಜನೆಯ 233 ಕೋಟಿ ರೂ. ಬಿಲ್ ಪಾವತಿಗೆ ಮಧ್ಯವರ್ತಿ ಡಾಕ್ಟರ್ ಚೀಟಿ ಬೇಕು ಎಂಬುದು ಪತ್ರಿಕೆಯಲ್ಲಿ ವರದಿಯಾಗಿದೆ ಎಂದು ಹೇಳಿದರು.