ಚಾಮರಾಜನಗರ: ಆ ಮಳೆಯ ನೀರಲ್ಲಿ ಬದುಕುವ ಗ್ಯಾರಂಟಿಯೇ ಇರಲಿಲ್ಲಾ, ಗುಡ್ಡದ ಮೇಲೆ ನಾವು ನಿಂತಿದ್ದೆವು. ಎಲ್ಲವೂ ಕೊಚ್ಚಿಕೊಂಡು ಹೋಗುತ್ತಿತ್ತು ಎಂದು ದುರಂತದಲ್ಲಿ ಪಾರಾಗಿ ಬಂದ ಮಹಿಳೆ ಕಣ್ಣೀರು ಹಾಕಿದರು.
ಕೇರಳದ ವಯನಾಡು ಭೂ ಕುಸಿತದಲ್ಲಿ ಪಾರಾಗಿ ಸ್ವಗ್ರಾಮ ಗುಂಡ್ಲುಪೇಟೆ ತಾಲೂಕಿನ ಕೋಡಗಳ್ಳಿಗೆ ಬಂದಿರುವ ಗೌರಮ್ಮ ಈಗಲೂ ದುರಂತದಲ್ಲಾದ ಆಘಾತದಿಂದ ಚೇತರಿಸಿಕೊಂಡಿಲ್ಲ. ಅಂದು ಇಡೀರಾತ್ರಿ ಮಳೆಯಲ್ಲಿ ತೊಯ್ದು, ಕೊನೆಗೆ ಸುರಕ್ಷಿತವಾಗಿ ಮನೆಗೆ ಬಂದಿದ್ದಾರೆ.
ಕೇರಳದ ವಯನಾಡಿನ ಚೂರಲ್ ಮಲೆ ಟೀ ಎಸ್ಟೇಟ್‍ನಲ್ಲಿ 30 ವರ್ಷಗಳಿಂದ ಕೆಲಸ ಮಾಡಿ ಜೀವನ ಕಟ್ಟಿಕೊಂಡಿದ್ದ ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಗ್ರಾಮದ ಗೌರಮ್ಮ ಅವರ ಕುಟುಂಬ, ಹಸುಗಳ ಕಿರುಚಾಟದಿಂದ ಜೀವ ಉಳಿಸಿಕೊಂಡು ಗುಡ್ಡ ಕುಸಿತದ ಘಟನೆಯಲ್ಲಿ ಬದುಕುಳಿದಿದ್ದಾರೆ.
'ಹಸುಗಳ ಕಿರುಚಾಟದಿಂದ ಎದ್ದೆವು':ಕೋಡಹಳ್ಳಿಯ ಗೌರಮ್ಮ, ಮಗ ವಿನೋದ್, ಅಣ್ಣ ಸಿದ್ದರಾಜು, ಅತ್ತಿಗೆ ಜಯಮ್ಮ, ಅಣ್ಣನ ಮಗ ಮಹೇಶ್ ಐದು ಮಂದಿ ಚೂರಲ್ ಮಲೆಯಲ್ಲಿ ದುರಂತ ನಡೆದ ಸೋಮವಾರ ರಾತ್ರಿ ಎಂದಿನಂತೆ ಊಟ ಮುಗಿಸಿ ಮಲಗಿದ್ದರು. ಮಧ್ಯ ರಾತ್ರಿ ಕುಟುಂಬಸ್ಥರು ಸಾಕಿದ್ದ 18 ಹಸುಗಳ ಕಿರುಚಾಟ ಜೋರಾದ ಹಿನ್ನೆಲೆಯಲ್ಲಿ ಎದ್ದು ನೋಡಿದಾಗಿ ಕೊಟ್ಟಿಗೆಯೊಳಗೆ ನೀರು ನುಗ್ಗಿ ಹಸುಗಳ ದೇಹಕ್ಕೆ ಆವರಿಸತೊಡಗಿತ್ತು. ಎಲ್ಲಾ ಹಸುಗಳ ಹಗ್ಗ ಚಿಚ್ಚಿ ಬಿಟ್ಟಿದ್ದಾರೆ. ನಂತರ ಕುಟುಂಬದ 6, ಅಕ್ಕಪಕ್ಕದ 12 ಮಂದಿ ಸೇರಿ ಒಟ್ಟು 18 ಮಂದಿ ಪಕ್ಕದ ಗುಡ್ಡವನ್ನೇರಿ, ತಾವಿದ್ದ ಪ್ರದೇಶದಿಂದ 5 ಕಿ.ಮೀ ಮೇಲೆ ಹತ್ತಿ ಬಚಾವಾಗಿದ್ದಾರೆ.