ಬೆಂಗಳೂರು: ಬಿಜೆಪಿ ಭದ್ರಕೋಟೆ ಆಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟ ಕ್ಷೇತ್ರವಾಗಿದೆ. ಪ್ರಧಾನಿ ಮೋದಿ ಗ್ಯಾರಂಟಿಯೊಂದಿಗೆ ಹಾಲಿ ಸಂಸದ ತೇಜಸ್ವಿ ಸೂರ್ಯ ಮತಬೇಟೆಯಲ್ಲಿ ತೊಡಗಿದ್ದರೆ, ಗ್ಯಾರಂಟಿ ಅಲೆಯ ಜತೆಗೆ ಅಪ್ಪನ ರಣತಂತ್ರದಡಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಮುನ್ನುಗ್ಗುತ್ತಿದ್ದಾರೆ.
8 ವಿಧಾನಸಭಾ ಕ್ಷೇತ್ರಗಳೊಂದಿಗೆ 23 ಲಕ್ಷ ಮತದಾರರನ್ನು ಹೊಂದಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದೆ. ಈವರೆಗೂ ನಡೆದಿರುವ 13 ಚುನಾವಣೆಗಳಲ್ಲಿ ಕಾಂಗ್ರೆಸ್ ಕೇವಲ ಎರಡು ಬಾರಿ ಮಾತ್ರ ಗೆದ್ದಿದೆ. (JNP 2 ಬಾರಿ ಮತ್ತು BLD 1 ಬಾರಿ ಗೆದ್ದಿದೆ) 1991 ರಿಂದ 2019 ರವರೆಗೂ 8 ಬಾರಿ ಸತತವಾಗಿ ಬಿಜೆಪಿ ಕ್ಷೇತ್ರವನ್ನು ಗೆದ್ದುಕೊಂಡ ಬಂದಿದೆ. ವೆಂಕಟಗಿರಿಗೌಡ ಬಿಜೆಪಿಗೆ ಮೊದಲ ಗೆಲುವು ತಂದರೆ ನಂತರ ಅನಂತ್ ಕುಮಾರ್ ಸತತವಾಗಿ 6 ಬಾರಿ ಆಯ್ಕೆಯಾಗಿದ್ದರು, ಅವರ ನಿಧನದ ನಂತರ ತೇಜಸ್ವಿ ಸೂರ್ಯ ಒಮ್ಮೆ ಸಂಸದರಾಗಿದ್ದು ಮರು ಆಯ್ಕೆ ಬಯಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
ಕ್ಷೇತ್ರದಲ್ಲಿ ಅನಂತ್ ಕುಮಾರ್ ಮಾಡಿದ್ದ ಅಭಿವೃದ್ಧಿ, ನರೇಂದ್ರ ಮೋದಿಯ ಸಾಧನೆಗಳು ಹಾಗೂ ಕ್ಷೇತ್ರದ ಅಭಿವೃದ್ಧಿ ಕೆಲಸ ಕಾರ್ಯಗಳು ನನ್ನ ಕೈಹಿಡಿಯಲಿದೆ ಎಂಬ ವಿಶ್ವಾಸದಲ್ಲಿ ತೇಜಸ್ವಿ ಸೂರ್ಯ ಇದ್ದಾರೆ. ಸಬ್ ಅರ್ಬನ್ ರೈಲು, ಮೆಟ್ರೋ ಯೋಜನೆ ವಿಸ್ತರಣೆ, ಜನೌಷಧಿ ಕೇಂದ್ರಗಳ ದಾಖಲೆಯ ಸ್ಥಾಪನೆ ಕ್ಷೇತ್ರದ ಮತದಾರರನ್ನು ಸೆಳೆದಿದೆ. ಆದರೂ ಗುರುರಾಘವೇಂದ್ರ ಕೋ ಆಪರೇಟಿವ್ ಸೊಸೈಟಿ ಹಗರಣ ಪ್ರಕರಣದಲ್ಲಿ ಜನರಿಗೆ ನ್ಯಾಯ ಕೊಡಿಸಲು ತೇಜಸ್ವಿ ಸೂರ್ಯ ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ ಎನ್ನುವ ಆರೋಪವಿದೆ. ಕ್ಷೇತ್ರದ ಜನರ ಕೈಗೆ ಸಿಗುವುದಿಲ್ಲ ಎನ್ನುವ ಅಪವಾದವೂ ಇದೆ. ಆದರೂ ನಕಾರಾತ್ಮಕ ಅಂಶಗಳನ್ನು ಮೀರಿ ತೇಜಸ್ವಿ ಸೂರ್ಯ ಪ್ರಚಾರ ನಡೆಸುತ್ತಿದ್ದಾರೆ.
ತಮಿಳು ಭಾಷಿಕರ ಸೆಳೆಯಲು ತೇಜಸ್ವಿ ಸೂರ್ಯ, ಸಿಂಗಂ ಖ್ಯಾತಿಯ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸಾಥ್ ಪಡೆದುಕೊಂಡಿದ್ದಾರೆ. ಕ್ಷೇತ್ರದಲ್ಲಿ ಬಿರುಸಿನ ರೋಡ್ ಶೋ ನಡೆಸಿರುವ ಅಣ್ಣಾಮಲೈ, ಹಾಲಿ ಸಂಸದ ತೇಜಸ್ವಿ ಸೂರ್ಯ ಪರ ಮತ ಯಾಚನೆ ಮಾಡಿದ್ದಾರೆ. ತೆಲುಗು ಭಾಷಿಕರು ಹೆಚ್ಚಿರುವ ಕಡೆ ಪ್ರಚಾರ ನಡೆಸಿದ್ದಾರೆ.
ಇನ್ನು ಈ ಬಾರಿ ಗೋವಿಂದರಾಜನಗರ, ವಿಜಯನಗರದ ಶಕ್ತಿಯಾಗಿದ್ದ ವಿ.ಸೋಮಣ್ಣ ಅನುಪಸ್ಥಿತಿ ತೇಜಸ್ವಿ ಸೂರ್ಯ ಅವರನ್ನು ಕಾಡುತ್ತಿದೆ. ಈ ಕ್ಷೇತ್ರಗಳಲ್ಲಿ ಹೆಚ್ಚಿನ ಮತಸೆಳೆದು ಬಿಜೆಪಿ ಅಭ್ಯರ್ಥಿ ಗೆಲುವಿನ ಅಂತರ ಹೆಚ್ಚಳಕ್ಕೆ ಕಾರಣೀಕರ್ತರಾಗಿದ್ದಾರೆ. 2009 ರಿಂದ 2019ರ ಚುನಾವಣೆವರೆಗೆ ಅನಂತ್ ಕುಮಾರ್ ಗೆಲುವು ಹಾಗೂ ತೇಜಸ್ವಿ ಸೂರ್ಯ ಗೆಲುವಿಗೂ ಕೊಡುಗೆ ನೀಡುತ್ತಾ ಬಂದಿದ್ದಾರೆ. ಆದರೆ, ಈ ಬಾರಿ ಅವರು ತುಮಕೂರು ಅಭ್ಯರ್ಥಿಯಾಗಿರುವ ಕಾರಣದಿಂದ ಅವರ ಅನುಪಸ್ಥಿತಿ ಹಾಲಿ ಸಂಂಸದರಿಗೆ ಈ ಕ್ಷೇತ್ರಗಳ ಲೀಡ್ ಕಡಿಮೆಯಾಗುವ ಆತಂಕ ಸೃಷ್ಟಿಸಿದೆ.
ಸೋಮಣ್ಣ ಅನುಪಸ್ಥಿತಿ ಕಾಡುತ್ತಿದ್ದರೂ ಮಿತ್ರಪಕ್ಷದ ನಾಯಕ ಹೆಚ್.ಡಿ ಕುಮಾರಸ್ವಾಮಿ ತೇಜಸ್ವಿ ಪರ ಪ್ರಚಾರ ನಡೆಸಿ ಜೆಡಿಎಸ್ ಮತಗಳ ಕ್ರೋಢೀಕರಿಸುವ ಪ್ರಯತ್ನ ನಡೆಸಿದ್ದಾರೆ. ಇದರಿಂದಾಗಿ ತೇಜಸ್ವಿ ಸೂರ್ಯ ಅಲ್ಪ ನಿರಾಳರಾಗಿದ್ದಾರೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿ ಸಮಾವೇಶ ಹಾಗೂ ಅಮಿತ್ ಶಾ ರೋಡ್ ಶೋ ಮೇಲೆ ತೇಜಸ್ವಿ ಸೂರ್ಯ ಹೆಚ್ಚಿನ ಭರವಸೆ ಹೊಂದಿದ್ದಾರೆ.
ತೀವ್ರ ಸ್ಪರ್ಧೆ ಒಡ್ಡುತ್ತಿರುವ ಸೌಮ್ಯ ರೆಡ್ಡಿ:ಬಿಜೆಪಿ ಅನಾಯಾಸವಾಗಿ ಗೆಲ್ಲುತ್ತಿದ್ದ ಕ್ಷೇತ್ರದಲ್ಲಿ ಈ ಬಾರಿ ಬೆಂಗಳೂರಿನ ಪ್ರಭಾವಿ ಕಾಂಗ್ರೆಸ್ ನಾಯಕ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಮಾಜಿ ಶಾಸಕಿ ಸೌಮ್ಯರೆಡ್ಡಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ವಿಧಾನಸಭೆ ಚುನಾವಣೆಯ ಸೋಲಿನ ಸೇಡು ತೀರಿಸಿಕೊಳ್ಳಲು ಸೌಮ್ಯರೆಡ್ಡಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಅವಿರತವಾಗಿ ಕ್ಷೇತ್ರದ ತುಂಬಾ ಓಡಾಡುತ್ತಾ ಪ್ರಚಾರದಲ್ಲಿ ತೊಡಗಿದ್ದಾರೆ. ಸ್ವತಃ ರಾಮಲಿಂಗಾರೆಡ್ಡಿಗೂ ಇದು ಪ್ರತಿಷ್ಠೆಯ ಚುನಾವಣೆ. ಹಾಗಾಗಿ ಅವರೂ ಹಗಲಿರುಳು ಪುತ್ರಿಯ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನು ಇವರ ಬೆನ್ನೆಲುವಾಗಿ ಡಿಸಿಎಂ ಡಿಕೆ ಶಿವಕುಮಾರ್ ನಿಂತಿದ್ದು, ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಧ್ವಜ ಹಾರಿಸುವ ಪಣ ತೊಟ್ಟಿದ್ದಾರೆ. ಹೀಗಾಗಿ ಕಳೆದ ಲೋಕಸಭಾ ಚುನಾವಣೆಗಿಂತ ಈ ಬಾರಿ ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ ಚಟುವಟಿಕೆಗಳು ಹೆಚ್ಚಿವೆ.