ಕರ್ನಾಟಕ

karnataka

ETV Bharat / state

ದೇವದಾಸಿ ಮಹಿಳೆಯರಿಗೂ ಗೃಹಲಕ್ಷ್ಮೀ ನೆರವು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ - GRIHALAKSHMI MONEY TO DEVADASIS

ದೇವದಾಸಿ ಮಹಿಳೆಯರಿಗೆ ಗೃಹ ಲಕ್ಷ್ಮೀ ಯೋಜನೆ ಹಾಗೂ ಮಾಸಾಶನ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ಸಹಾಯಧನ ಹಾಗೂ ವಸತಿ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದರು.

lakshmi hebbalkar
ಲಕ್ಷ್ಮಿ ಹೆಬ್ಬಾಳ್ಕರ್ (ETV Bharat)

By ETV Bharat Karnataka Team

Published : 6 hours ago

ಬೆಳಗಾವಿ:ರಾಜ್ಯದಲ್ಲಿನ ದೇವದಾಸಿ ಮಹಿಳೆಯರಿಗೂ ಗೃಹ ಲಕ್ಷ್ಮೀ ಯೋಜನೆಯ ನೆರವು ದೊರೆಯುತ್ತಿದೆ. ಇನ್ನು ಸೌಲಭ್ಯ ದೊರೆಯದ ಬಗ್ಗೆ ಯಾವುದೇ ದೂರು ಸಲ್ಲಿಕೆಯಾಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು.

ಶುಕ್ರವಾರ ವಿಧಾನಪರಿಷತ್ತಿನಲ್ಲಿ ಸದಸ್ಯೆ ಹೇಮಲತಾ ನಾಯಕ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು. ''ರಾಜ್ಯದಲ್ಲಿ ದೇವದಾಸಿ ಮಹಿಳೆಯರಿಗೆ ಮಾಸಾಶನ ಯೋಜನೆಯಡಿ ಪ್ರತಿ ತಿಂಗಳು 2 ಸಾವಿರ ರೂ., ಆರ್ಥಿಕ ಸಹಾಯ ಯೋಜನೆಯಡಿ 30‌ ಸಾವಿರ ರೂ. ಸಹಾಯಧನ ಹಾಗೂ ಮಾಜಿ ದೇವದಾಸಿ ವಸತಿ ಯೋಜನೆಯಡಿ ವಸತಿ ಸೌಲಭ್ಯ ಒದಗಿಸಲಾಗುತ್ತಿದೆ'' ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

''ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ 6,018 ದೇವದಾಸಿ ಮಹಿಳೆಯರನ್ನು ಸಮೀಕ್ಷೆಯಲ್ಲಿ ಗುರುತಿಸಿದ್ದು 2,653 ಮಂದಿ ಜೀವಂತವಿದ್ದಾರೆ. ಜಿಲ್ಲೆಗೆ ಸಂಬಂಧಿಸಿದಂತೆ ಮತ್ತೊಮ್ಮೆ ಸಮೀಕ್ಷೆ ನಡೆಸಿ ಅರ್ಹರನ್ನು ಗುರುತಿಸಿ ಸೌಲಭ್ಯಗಳನ್ನು ಒದಗಿಸಲಾಗುವುದು. ಅದೇ ರೀತಿ ಅನಿಷ್ಟವಾಗಿರುವ ದೇವದಾಸಿ ಪದ್ಧತಿಯನ್ನು ಬೇರು ಸಮೇತ ಕಿತ್ತೊಗೆಯಲು ಪ್ರಯತ್ನಿಸಲಾಗುತ್ತಿದೆ'' ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ:ಕಸ ಸಂಗ್ರಹಿಸುವ ವಾಹನಗಳಿಗೆ GPS ಅಳವಡಿಕೆ: ವಾಹನ ಎಲ್ಲಿದೆ, ಯಾವಾಗ ಬರಲಿದೆ ಎಂದು ತಿಳಿಸಲಿದೆ 'ಡಿವಿಜಿ ಹೆಲ್ಪ್‌' ಆ್ಯಪ್‌

ರಾಜ್ಯದಲ್ಲಿ 3,988 ಹೊಸ ಅಂಗನವಾಡಿ ಕೇಂದ್ರ: ಇದೇ ವೇಳೆ, ''ರಾಜ್ಯದಲ್ಲಿ ಹೊಸದಾಗಿ 3,988 ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರ್ಕಾರದ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ'' ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

ಪರಿಷತ್​​ ಸದಸ್ಯ ಜವರಾಯಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ''ಹೊಸದಾಗಿ ಅಂಗನವಾಡಿ ಕೇಂದ್ರ ಪ್ರಾರಂಭಿಸಲು ಕೇಂದ್ರ ಸರ್ಕಾರದ ಅನುಮೋದನೆಯ ಅವಶ್ಯಕತೆ ಇರುತ್ತದೆ. ಏಕೆಂದರೆ ಅಂಗನವಾಡಿ ಕೇಂದ್ರದಲ್ಲಿ ಫಲಾನುಭವಿಗಳಿಗೆ ಪೂರೈಸಲಾಗುವ ಪೂರಕ ಪೌಷ್ಟಿಕ ಆಹಾರ ಯೋಜನೆಯಡಿ ಹಂಚಿಕೆ ಅನುದಾನದಲ್ಲಿ ಕೇಂದ್ರದ ಪಾಲು ಶೇ.20ರಷ್ಟು ಇರುತ್ತದೆ'' ಎಂದರು.

''ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಗೌರವಧನ ಪಾವತಿಯಲ್ಲಿ ಆಡಳಿತ ವೆಚ್ಚದಡಿ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದ ಪಾಲು ಶೇ.30ರಷ್ಟಿರುತ್ತದೆ. ಮುಂದುವರೆದು, ಸಬ್ಸಿಡಿ ದರದಲ್ಲಿ ಅಕ್ಕಿ ಮತ್ತು ಗೋಧಿಯನ್ನು ಸಹ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹಂಚಿಕೆ ಮಾಡುತ್ತದೆ'' ಎಂದು ತಿಳಿಸಿದರು.

''ಸದ್ಯ ಕರ್ನಾಟಕ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಅನುಮೋದಿತ 65,931 ಅಂಗನವಾಡಿ ಕೇಂದ್ರಗಳು ಹಾಗೂ ರಾಜ್ಯ ಸರ್ಕಾರದ ವತಿಯಿಂದ ಅನುದಾನಿತ 3,988 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಈಗ 3,988 ಅಂಗನವಾಡಿ ಕೇಂದ್ರಗಳಿಗೆ ಕೇಂದ್ರ ಸರ್ಕಾರದ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ'' ಎಂದರು.

''ರಾಜ್ಯದಲ್ಲಿ ಸ್ವಂತ ಕಟ್ಟಡವಿಲ್ಲದ ಅಂಗನವಾಡಿ ಕೇಂದ್ರಗಳಿಗೆ ಹೊಸದಾಗಿ ಕಟ್ಟಡ ನಿರ್ಮಿಸಲು ಕಳೆದ 2 ವರ್ಷಗಳಲ್ಲಿ 22,923 ಲಕ್ಷ ರೂ. ಅನುದಾನ ಬಿಡುಗಡೆಯಾಗಿರುತ್ತದೆ. ಒಟ್ಟು 337 ಅಂಗನವಾಡಿ ಕಟ್ಟಡಗಳ ಕಾಮಗಾರಿ ಪೂರ್ಣಗೊಂಡಿದೆ '' ಎಂದು ಸದನಕ್ಕೆ ಹೆಬ್ಬಾಳ್ಕರ್ ಮಾಹಿತಿ ನೀಡಿದರು.

ಇದನ್ನೂ ಓದಿ:ಅರ್ಹರ ಬಿಪಿಎಲ್​ ಪಡಿತರ ಚೀಟಿ ರದ್ದು ಮಾಡಲ್ಲ, ಹೊಸ ಕಾರ್ಡ್​ ವಿತರಿಸಲು ಕ್ರಮ: ಸಚಿವ ಕೆ.ಹೆಚ್.ಮುನಿಯಪ್ಪ ಅಭಯ

ABOUT THE AUTHOR

...view details