ಬೆಂಗಳೂರು:ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್ ಕ್ರಮ ಪ್ರಶ್ನಿಸಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಗೃಹ ಇಲಾಖೆ ಅನುಮತಿ ನೀಡಿದೆ.
ಮೇಲ್ಮನವಿ ಸಲ್ಲಿಸಲು ಅನುಮತಿಸಿರುವ ಕಡತವನ್ನು ಗೃಹ ಇಲಾಖೆಯಿಂದ ಪೊಲೀಸರಿಗೆ ರವಾನಿಸಲಾಗಿದೆ. ಮಂಗಳವಾರ ಅಥವಾ ಬುಧವಾರ ರಾಜ್ಯ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಲಿದ್ದಾರೆ.
ಪ್ರಕರಣದ ಆರೋಪಿಗಳಾಗಿರುವ ದರ್ಶನ್, ಪವಿತ್ರಾ ಗೌಡ ಮತ್ತಿತರರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದನ್ನ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅನುಮತಿ ಕೋರಿ ಪೊಲೀಸರು ಗೃಹ ಇಲಾಖೆಗೆ ಪತ್ರ ಬರೆದಿದ್ದರು. ಸುಪ್ರೀಂಕೋರ್ಟ್‌ನಲ್ಲಿ ಸರ್ಕಾರದ ಪರವಾಗಿ ಹಿರಿಯ ವಕೀಲ ಸಿದ್ದಾರ್ಥ್ ಲೂಥ್ರಾ ಅವರು ವಾದ ಮಂಡಿಸಲಿದ್ದಾರೆ. ಕಾನೂನು ತಜ್ಞರಿಂದ ಸಲಹೆ ಪಡೆದ ಬಳಿಕ ಪೊಲೀಸರ ಕೋರಿಕೆಗೆ ರಾಜ್ಯ ಗೃಹ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದ, ಜಾಮೀನು ಪಡೆದಿರುವ ಆರೋಪಿಗಳಿಗೆ ಮತ್ತೊಮ್ಮೆ ಆತಂಕ ಎದುರಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿದ್ದ ದರ್ಶನ್, ಬೆನ್ನು ನೋವಿಗೆ ಚಿಕಿತ್ಸೆಯ ಕಾರಣ ನೀಡಿ 6 ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದಿದ್ದರು. ಇದಾದ ಬಳಿಕ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳಿಗೂ ಹೈಕೋರ್ಟ್ ರೆಗ್ಯುಲರ್ ಜಾಮೀನು ಮಂಜೂರು ಮಾಡಿತ್ತು. ನಂತರ ಮೈಸೂರಿಗೆ ತೆರಳಲು ಹೈಕೋರ್ಟ್‌ನಿಂದ ಅನುಮತಿ ಪಡೆದಿರುವ ದರ್ಶನ್, ಸದ್ಯ ಮೈಸೂರಿನ ಫಾರ್ಮ್ ಹೌಸ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ.
ಜೂನ್ 11ರಂದು ದರ್ಶನ್ ಬಂಧನ:ಬೆಂಗಳೂರಿನ ಮಾಗಡಿ ರಸ್ತೆಯ ಸುಮನಹಳ್ಳಿಯ ಚರಂಡಿ ಬಳಿ ರೇಣುಕಾಸ್ವಾಮಿ (33) ಶವ ಪತ್ತೆಯಾಗಿತ್ತು. ಹತ್ಯೆಗೈದ ಆರೋಪದ ಮೇಲೆ ಬೆಂಗಳೂರು ಪೊಲೀಸರು ಜೂನ್ 11ರಂದು ಮೈಸೂರಿನಲ್ಲಿ ದರ್ಶನ್ ಅವರನ್ನು ಬಂಧಿಸಿದ್ದರು. ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ದರ್ಶನ್ ಮತ್ತು ಅವರ ಸ್ನೇಹಿತರು ರೇಣುಕಾಸ್ವಾಮಿಯನ್ನು ಕೊಲೆ ಮಾಡಿರುವ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದರ್ಶನ್ ಅವರ ನಿರ್ದೇಶನದಂತೆ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ಬಳಿಕ ಅಲ್ಲಿ ಮೂರು ದಿನಗಳ ಕಾಲ ಶೆಡ್‌ನಲ್ಲಿಟ್ಟು ಚಿತ್ರಹಿಂಸೆ ನೀಡಲಾಗಿತ್ತು. ಚಿತ್ರಹಿಂಸೆ ತಾಳಲಾರದೆ ರೇಣುಕಾಸ್ವಾಮಿ ಸಾವನ್ನಪ್ಪಿದ್ದು, ತದನಂತರ ಶವವನ್ನು ಚರಂಡಿಗೆ ಎಸೆಯಲಾಗಿತ್ತು ಎಂದು ಪೊಲೀಸರು ತಮ್ಮ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಪ್ರತ್ಯಕ್ಷ ಸಾಕ್ಷಿಗಳು ಆರೋಪಿಗಳ ಗುರುತು ಹಿಡಿಯಲು ವಿಫಲ; 44 ವರ್ಷ ಹಿಂದಿನ ಕೊಲೆ ಪ್ರಕರಣ ಕೈಬಿಟ್ಟ ಹೈಕೋರ್ಟ್