ಬೆಳಗಾವಿ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅಗಲಿಕೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ನಡೆಯಬೇಕಿದ್ದ "ಗಾಂಧಿ ಭಾರತ" ಕಾರ್ಯಕ್ರಮ ರದ್ದಾಯಿತು. ಜೊತೆಗೆ ಅದ್ಧೂರಿ ವಿದ್ಯುತ್ ದೀಪಾಲಂಕಾರ ಪ್ರದರ್ಶನವನ್ನೂ ಸ್ಥಗಿತಗೊಳಿಸಲಾಗಿದೆ.
ಹೌದು, ಡಾ.ಸಿಂಗ್ ಅವರ ನಿಧನದ ಹಿನ್ನೆಲೆ ಕಾಂಗ್ರೆಸ್ ಐತಿಹಾಸಿಕ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಡೀ ಬೆಳಗಾವಿ ನಗರ ದೀಪಗಳಿಂದ ಕಂಗೊಳಿಸುತ್ತಿತ್ತು. ಅಂದಾಜು 8 ಕೋಟಿ ವೆಚ್ಚದಲ್ಲಿ 104 ಕಿ.ಮೀ. ಉದ್ದಕ್ಕೂ, 90 ವೃತ್ತಗಳು ಕಳೆದ ಡಿ.9 ರಿಂದ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದವು. ಅಕ್ಷರಶಃ ಬೆಳಕಿನ ಸ್ವರ್ಗವೇ ಬೆಳಗಾವಿಯಲ್ಲಿ ಧರೆಗಿಳಿದಿತ್ತು.
ಡಾ.ಸಿಂಗ್ ಅಗಲಿಕೆ ಹಿನ್ನೆಲೆ: ಬೆಳಗಾವಿಯಲ್ಲಿ ಅದ್ಧೂರಿ ಲೈಟಿಂಗ್ ಶೋ ಸ್ಥಗಿತ (ETV Bharat) ಇತ್ತ ಬೆಳಗಾವಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಭೆ ಮುಗಿಯುತ್ತಿದ್ದಂತೆ, ಅತ್ತ ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ದೇಶ ಕಂಡ ಅದ್ಭುತ ಪ್ರಧಾನಿ, ಶ್ರೇಷ್ಠ ಆರ್ಥಿಕ ತಜ್ಞ ಡಾ.ಮನಮೋಹನ್ ಸಿಂಗ್ ಕೊನೆಯುಸಿರೆಳೆದರು. ಸುದ್ದಿ ತಿಳಿಯುತ್ತಿದ್ದಂತೆ ರಾತ್ರೋರಾತ್ರಿ ರಾಹುಲ್, ಖರ್ಗೆ ದೆಹಲಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು.
ಇನ್ನು ಬಹಿರಂಗ ಸಮಾವೇಶಕ್ಕೆ ಸಾಕ್ಷಿಯಾಗಬೇಕಿದ್ದ ಬೆಳಗಾವಿ ಸಿಪಿಇಡ್ ಮೈದಾನದ ವೇದಿಕೆ ಡಾ.ಮನಮೋಹನ್ ಸಿಂಗ್ ಅವರ ಶ್ರದ್ಧಾಂಜಲಿ ಸಭೆಯಾಗಿ ಪರಿವರ್ತನೆ ಆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು, ಸಂಸದರು ಮತ್ತು ಮುಖಂಡರು ಅಗಲಿದ ಮಹಾನ್ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ನಾಯಕರು ದೆಹಲಿಗೆ ತೆರಳಿದರು.
ಇನ್ನು ಕರ್ನಾಟಕದಲ್ಲಿ 7 ದಿನ ಶೋಕಾಚರಣೆಗೆ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ವಿದ್ಯುತ್ ದೀಪಗಳ ಪ್ರದರ್ಶನ ಬಂದ್ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿತು. ಗುರುವಾರ ಸಂಜೆ ವಿದ್ಯುತ್ ದೀಪಗಳು ಉರಿಯುತ್ತಿದ್ದವು. ಆದರೆ, ಶುಕ್ರವಾರ ಸಂಜೆ ದೀಪಗಳನ್ನು ಆರಿಸಲಾಗಿದೆ. ಲೈಟಿಂಗ್ ಸರಗಳು, ಪ್ರತಿಕೃತಿಗಳನ್ನು ತೆಗೆಯುವ ಕೆಲಸದಲ್ಲಿ ಕಾರ್ಮಿಕರು ನಿರತರಾಗಿದ್ದಾರೆ.
ಡಾ.ಮನಮೋಹನ್ ಸಿಂಗ್ ಅವರು ಮೃತರಾಗಿದ್ದಾರೆ. ಹಾಗಾಗಿ, ವಿದ್ಯುತ್ ದೀಪಗಳನ್ನು ತೆಗೆಯುವಂತೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ. ಹಾಗಾಗಿ, ಶುಕ್ರವಾರ ಸಂಜೆ ಲೈಟಿಂಗ್ ಪ್ರದರ್ಶನ ಬಂದ್ ಮಾಡಿದ್ದು, ದೀಪಗಳನ್ನು ಒಂದೊಂದಾಗಿ ತೆಗೆಯುತ್ತಿದ್ದೇವೆ ಎಂದು ಲೈಟಿಂಗ್ಸ್ ಸಂಸ್ಥೆ ಮಾಲೀಕ ವಿ.ಮೋಹನ್ ಕುಮಾರ್ ಈಟಿವಿ ಭಾರತಕ್ಕೆ ತಿಳಿಸಿದರು.
ಇದನ್ನೂ ಓದಿ:ಮನಮೋಹನ್ ಸಿಂಗ್ ಸ್ಮಾರಕಕ್ಕೆ ಕೇಂದ್ರ ಜಾಗ ಮಂಜೂರು ಮಾಡಲಿದೆ: ಗೃಹ ಸಚಿವಾಲಯದ ಸ್ಪಷ್ಟನೆ