ಬೆಂಗಳೂರು:ಬಿಜೆಪಿ ಜೆಡಿಎಸ್ ಪಾದಯಾತ್ರೆಗೆ ಅನುಮತಿ ಕೊಡಲು ನಿರ್ಧರಿಸಿದ್ದೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು. ಸದಾಶಿವನಗರ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಶಾಂತಿಯುತ ಪಾದಯಾತ್ರೆ ನಡೆಸ್ತೇವೆ ಎಂದಿದ್ದಾರೆ. ಹೀಗಾಗಿ ಅನುಮತಿ ಕೊಡಲು ನಾವು ನಿರ್ಧರಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಸಿಎಂಗೆ ರಾಜ್ಯಪಾಲರ ಶೋಕಾಸ್ ನೊಟೀಸ್ ವಿಚಾರವಾಗಿ ಪ್ರತಿಕ್ರಿಯಿಸಿ, ನಿನ್ನೆ ರಾತ್ರಿ ಸಂಪುಟ ನಿರ್ಣಯ ಕಳಿಸಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ರಾಜ್ಯಪಾಲರು ಇಲ್ಲ. ಅವರ ಕಚೇರಿಗೆ ನಿನ್ನೆಯೇ ತಲುಪಿಸಿರಬೇಕು. ಆತುರವಾಗಿ ಶೋಕಾಸ್ ನೊಟೀಸ್ ಕೊಟ್ಟಿದ್ದಾರೆ. ರಾಜ್ಯಪಾಲರ ಮೇಲೆ ಬೇರೆ ಒತ್ತಡ ಇರಬಹುದು. ಆ ರೀತಿಯ ಅನುಮಾನಗಳು ನಮಗೆ ಬಂದಿವೆ. ರಾಜ್ಯಪಾಲರು ಏನೇ ನಿರ್ಧಾರ ಕೈಗೊಳ್ಳಲಿ. ಎದುರಿಸೋಕೆ ನಾವು ಸಿದ್ಧರಿದ್ದೇವೆ. ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ನಾವು ನ್ಯಾಯ್ಯಾಂಗದ ಬಾಗಿಲು ತಟ್ಟಬೇಕಾಗುತ್ತದೆ. ರಾಜ್ಯಪಾಲರಿಗೆ ನೊಟೀಸ್, ತನಿಖೆಗೆ ಅಧಿಕಾರವಿದೆ. ಆದರೆ, ಅವರು ದಾಖಲೆ ಸಮೇತ ಸಮರ್ಥಿಸಬೇಕು ಎಂದರು.
ಸರ್ಕಾರ - ರಾಜ್ಯಪಾಲರ ಸಂಘರ್ಷ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅನೇಕ ಸಂದರ್ಭದಲ್ಲಿ ಇಂಥ ಪ್ರಸಂಗ ಬರುತ್ತವೆ. ಕಾನೂನು ಪ್ರಕಾರ ಏನು ಮಾಡಬೇಕೋ ಮಾಡ್ತೇವೆ. ನಿಮ್ಮಿಂದ ತಪ್ಪಾಗಿದೆ ಅಂತ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡ್ತೇವೆ. ಅವರು ಸಂವಿಧಾನ ಬದ್ಧ ಅಧಿಕಾರ ಸರಿಯಾಗಿ ಬಳಸಬೇಕು. ಇಲ್ಲದಿದ್ದರೆ ಕಾನೂನು ಮೊರೆ ಹೋಗುವುದು ಅನಿವಾರ್ಯ. ಯಾವ ಆಧಾರದಲ್ಲಿ ಪ್ರಾಸಿಕ್ಯೂಷನ್ ಕೊಡ್ತಾರೆ ಅನ್ನೋದು ಬೇಕಲ್ಲ?. ನಾವು ಸ್ಪಷ್ಟೀಕರಣ ಕೊಟ್ಟ ಬಳಿಕವೂ ಅನುಮತಿಸಿದರೆ, ಅದನ್ನು ಅವರು ಸಮರ್ಥಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.