ಪುತ್ತೂರು (ದಕ್ಷಿಣ ಕನ್ನಡ):ಪುತ್ತೂರು ತಾಲೂಕು ಕುರಿಯ ಗ್ರಾಮದ ಸಂಪ್ಯದಮೂಲೆಯಲ್ಲಿ ಗೋಲೋಕೋತ್ಸವ ಅದ್ಧೂರಿಯಾಗಿ ನಡೆಯಿತು. ಗೋ ವಿಹಾರ ಧಾಮದಲ್ಲಿ ವಿವಿಧ ಜಾತಿ ಗೋವುಗಳು., ಇನ್ನೊಂದೆಡೆ ದೇಶಿ ಹಸುಗಳ ತ್ಯಾಜ್ಯದಿಂದ ತಯಾರಿಸಿದ ಉತ್ಪನ್ನ ಮಾರಾಟ, ಹಾಲಿನ ಉತ್ಪನ್ನಗಳಿಂದ ಸಿದ್ಧಗೊಳಿಸಿರುವ ಶುಚಿ ಶುಚಿಯಾದ ಖಾದ್ಯ, ಸಿಹಿತಿಂಡಿಗಳು ಜನರ ಗಮನ ಸೆಳೆದವು.
ದೇಶಿ ತಳಿಗಳನ್ನು ಸಂರಕ್ಷಿಸಿ ಪೋಷಿಸುವ ನಿಟ್ಟಿನಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ದೇವಳದ ಗೋ ಸೇವಾ ಬಳಗದ ಆಶ್ರಯದಲ್ಲಿ ಎರಡು ದಿನಗಳ ಗೋಲೋಕೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಗೋಲೋಕೋತ್ಸವ ಪ್ರಯುಕ್ತ ಪುತ್ತೂರು ನಗರದಿಂದ 4 ಕಿ.ಮೀ ದೂರದ ಸಂಪ್ಯದ ಮೂಲೆ ಗೋ ವಿಹಾರಧಾಮ ಇಂದು ಕಳೆಗಟ್ಟಿತ್ತು.
ಸುಮಾರು 10 ರಿಂದ 15 ವಿವಿಧ ಜಾತಿಯ ದೇಶಿ ಗೋ ತಳಿಗಳು ಗೋಲೋಕೋತ್ಸವದಲ್ಲಿ ಭಾಗವಹಿಸಿದ್ದವು. ಈ ತಳಿಗಳ ಬಗ್ಗೆ ರೈತಾಪಿ ಜನರು ಮಾಹಿತಿ ಪಡೆದುಕೊಂಡರು. ಆಹಾರ ಮತ್ತು ಔಷಧದ ನೆಲೆಯಲ್ಲಿ ದೇಶಿ ಹಸು ತಳಿಗಳ ಮಹತ್ವ, ಪಾಲನೆ ಸಹಿತ ಸನಾತನ ಸಂಸ್ಕೃತಿಯೊಂದಿಗೆ ಇವುಗಳಿಗೆ ಇರುವ ನಂಟು ಕುರಿತು ಜನರಲ್ಲಿ ಅರಿವು ಮೂಡಿಸಲಾಯಿತು. ಪ್ರದರ್ಶನದಲ್ಲಿದ್ದ ಮಲ್ನಾಡು ಗಿಡ್ಡ, ಗಿರ್ ಭಾವನಗರ್, ಪುಂಗನೂರು ಗೋವುಗಳ ಸಾಕಣೆಗೆ ಹೆಚ್ಚು ಜನರು ಒಲವು ತೋರುತ್ತಿರುವುದು ಕಂಡು ಬಂದಿತು. ಭಾನುವಾರ ರಜೆ ಇದ್ದಿದ್ದರಿಂದ ಅಪಾರ ಸಂಖ್ಯೆಯಲ್ಲಿ ಜನರು ಈ ಮೇಳದಲ್ಲಿ ಭಾಗವಹಿಸಿದ್ದರು.
ದೇಶಿ ತಳಿ ಗೋವುಗಳನ್ನು ಸಂರಕ್ಷಿಸಿ, ಬೆಳೆಸುವ ಕುರಿತು ಜಾಗೃತಿ ಮೂಡಿಸಲು ಕುರಿಯ ಗ್ರಾಮದ ಸಂಪ್ಯದಮೂಲೆಯಲ್ಲಿ ಗೋಲೋಕೋತ್ಸವ ಹಮ್ಮಿಕೊಂಡಿದ್ದೇವೆ. ಇಂದಿನ ಕಾಲದಲ್ಲಿ ಗೋವು ಸಾಕಣೆ ಕಮ್ಮಿಯಾಗುತ್ತಿದೆ. ನಮ್ಮ ಸನಾತನ ಸಂಸ್ಕೃತಿಯ ಪ್ರತೀಕ ದೇಶಿ ಗೋ ಸಂಪತ್ತು ಉಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಗೋ ಸೇವಾ ಬಳಗ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ವಿವಿಧ ಸಂಘ ಸಂಸ್ಥೆಗಳು ಸೇರಿ ಗೋ ವಿಹಾರಧಾಮದಲ್ಲಿ ದೇಶಿ ತಳಿ ಗೋವು ಸಂರಕ್ಷಣೆಗಾಗಿ ವಿವಿಧ ಯೋಜನೆ ಹಾಕಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ 200 ದೇಶಿ ಹಸು ಒಳಗೊಂಡ ಗೋ ಶಾಲೆ ಆರಂಭಿಸಬೇಕೆಂದು ವಿಚಾರವೂ ಇದೆ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಮಾಹಿತಿ ನೀಡಿದರು.