ಮಂಗಳೂರು: 14 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ತಪ್ಪಿತಸ್ಥನಿಗೆ 20 ವರ್ಷಗಳ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಲಾಗಿದೆ. ಬಂಟ್ವಾಳ ತಾಲೂಕಿನ 24 ವರ್ಷದ ಯುವಕ ಶಿಕ್ಷೆಗೊಳಗಾದ ಅಪರಾಧಿ.
ಈ ಪ್ರಕರಣದ ಅಪರಾಧಿ ಯುವಕ 14 ವರ್ಷ ಪ್ರಾಯದ ಬಾಲಕಿಯನ್ನು ಮೊಬೈಲ್ ಮೂಲಕ ಪರಿಚಯ ಮಾಡಿಕೊಂಡಿದ್ದನು. ನಂತರ ಅನೋನ್ಯತೆಯಿಂದ ಮಾತನಾಡಿ ಬಾಲಕಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿದ್ದನು. ಬಾಲಕಿಯ ತಾಯಿ ಅನಾರೋಗ್ಯದ ಕಾರಣ ಮಾತ್ರೆಗಳನ್ನು ತೆಗೆದುಕೊಂಡು ಮಲಗಿರುವಾಗ 2023ರ ಮೇ ತಿಂಗಳಿನಲ್ಲಿ ರಾತ್ರಿಯ ಸಮಯದಲ್ಲಿ ಬಾಲಕಿಯ ಮನೆಗೆ ಬಂದು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದನು ಎಂದು ಪ್ರಕರಣ ದಾಖಲಾಗಿತ್ತು.
ನಂತರದ ದಿನಗಳಲ್ಲಿಯೂ ಸಹ ಯುವಕ ಬಾಲಕಿಯ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದನು. ನಂತರ ಬಾಲಕಿಯ ದೇಹದಲ್ಲಿ ಆದ ಬದಲಾವಣೆಯನ್ನು ಗಮನಿಸಿದ ಆಕೆಯ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸಿದಾಗ ಆಕೆ 6 ತಿಂಗಳ ಗರ್ಭವತಿಯಾಗಿರುವುದು ತಿಳಿದುಬಂದಿತ್ತು. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಕಲಂ 376 ರಡಿ ಪ್ರಕರಣ ದಾಖಲಾಗಿತ್ತು. ಬಂಟ್ವಾಳ ನಗರ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಕೆ.ವಿ ಅವರು ತನಿಖೆ ಪೂರ್ಣಗೊಳಿಸಿ ಆರೋಪಿ ವಿರುದ್ಧ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.