ಕೊಪ್ಪಳ: ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ - 2025ರ ಪ್ರಯುಕ್ತ ಜಾತ್ರಾ ಆವರಣದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಹಮ್ಮಿಕೊಂಡ ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನ ಗವಿಸಿದ್ದೇಶ್ವರ ಜಾತ್ರೆಗೆ ಬಂದಿರುವ ಭಕ್ತರನ್ನ ಕೈಬೀಸಿ ಕರೆಯುತ್ತಿದೆ.
ಕೈ ಬೀಸಿ ಕರೆಯುತ್ತಿರುವ ವಿಮಾನ ಮಾದರಿ: ಹತ್ತು ಹಲವು ವಿಶೇಷತೆಯಿಂದ ಕೂಡಿರುವ ಕೊಪ್ಪಳ ಗವಿ ಸಿದ್ದೇಶ್ವರ ಜಾತ್ರೆಯಲ್ಲಿ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಐದು ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಏರ್ಪಡಿಸಿದ್ದು, ಅದರಲ್ಲಿರುವ ವಿಮಾನ ಮಾದರಿಯಲ್ಲಿ ಸಿದ್ಧವಾದ ಫಲ - ಪುಷ್ಪ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು. ಕೊಪ್ಪಳಕ್ಕೆ ವಿಮಾನ ನಿಲ್ದಾಣದ ಅವಶ್ಯಕತೆ ಇದ್ದು ಕಾರಣ ವಿಮಾನ ಮಾದರಿಯಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ. ವಿಮಾನ ಮಾದರಿಯ ಮುಂದೆ ಸೆಲ್ಪಿಗಾಗಿ ಜನರು ಸೇರುವುದು ಸಾಮಾನ್ಯವಾಗಿತ್ತು.
ನಾನಾ ಹಣ್ಣಗಳು ಪ್ರದರ್ಶನದಲ್ಲಿ ಗಮನ ಸೆಳೆದವು:ಜೊತೆಗೆ ದಾಳಿಂಬೆ, ದ್ರಾಕ್ಷಿ, ಡ್ರ‍್ಯಾಗನ್‌ಫ್ರೂಟ್, ಪೇರಳೆ ಸೇರದಂತೆ ಇನ್ನೂ ಅನೇಕ ಹಣ್ಣುಗಳ ಪ್ರದರ್ಶನದಲ್ಲಿದ್ದವು. ಮೈಸೂರು ದಸರಾದಲ್ಲಿ ಮಾತ್ರ ಇಂತಹ ಫಲ ಪುಷ್ಪ ಪ್ರದರ್ಶನ ನಡೆಯುತ್ತಿತ್ತು ಆದರೆ ಉತ್ತರ ಕರ್ನಾಟಕದ ಗವಿಮಠದ ಜಾತ್ರೆಯಲ್ಲಿ ಎಷ್ಟು ಪ್ರಮಾಣದಲ್ಲಿ ಫಲಪುಷ್ಪ ಪ್ರದರ್ಶನ ಮಾಡಲಾಗಿದೆ ಎಂದು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು.
ರೈತರಿಗೆ ಪೂರಕ ಮಾಹಿತಿ: ರೈತರು ಬೆಳೆದ ತರಕಾರಿ ಹಣ್ಣು ಹಂಪಲುಗಳ ಪ್ರದರ್ಶನ ಹಾಗೂ ಹೂ-ಗಳಿಂದ ತಯಾರಿಸಿದ ವಿವಿಧ ವಸ್ತುಗಳು. ವಿಶೇಷವಾಗಿ ತೋಟಗಾರಿಕೆ ಉತ್ಪಾದನಗಳ ರಪ್ತಿನ ಮಾಹಿತಿ, ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ ಇಲಾಖೆಯ ಕೈಪಿಡಿ, ಕೈತೋಟ ಮತ್ತು ತಾರಸಿ ತೋಟ ಹಾಗೂ ರೈತರು ತಮ್ಮ ಹೊಲದಲ್ಲಿ ಹವಾಮಾನ ಆಧಾರಿತ ಸ್ಟೇಷನ್ ಮಾಡಿಕೊಳ್ಳುವ ಪ್ರಾತ್ಯಕ್ಷಿಕೆ ಜೊತೆಗೆ ತೋಟಗಾರಿಕೆ ಇಲಾಖೆಯಿಂದ ನೀಡಲಾಗುವ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ಈ ಪ್ರದರ್ಶನ ಒಳಗೊಂಡಿದೆ. ಮುಖ್ಯವಾಗಿ ಮಾದರಿ ಜಲಾನಯನ ಹಾಗೂ ನೀರಿನ ಸಂರಕ್ಷಣೆ ಕುರಿತು ಪ್ರಾತ್ಯಕ್ಷಿಕೆ ಜನಮನ ಸೆಳೆಯುತ್ತಿದೆ.
ಬುಧವಾರದಿಂದ ಆರಂಭವಾಗಿರುವ ಗವಿಮಠದ ಮಹಾರಥೋತ್ಸವ ಒಂದು ತಿಂಗಳ ಕಾಲ ನಡೆಯಲಿದೆ. ಜಾತ್ರೆ ಆರಂಭದ ನಿಮಿತ್ತ ಬುಧವಾರ ಕರ್ತೃ ಗದ್ದುಗೆಗೆ ಅಲಂಕಾರ, ವಿಶೇಷ ಪೂಜೆಗಳು ಬೆಳಗ್ಗೆಯಿಂದಲೇ ನೆರವೇರಿದವು. ರಥೋತ್ಸವಕ್ಕೂ ಪೂಜೆಗಳು ಸಲ್ಲಿಕೆಯಾದವು. ಬುಧವಾರ ಸಂಜೆ 5ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಲಾಗಿದೆ.