ರಾಮನಗರ:ಜಿಲ್ಲೆಯ ಮಾಗಡಿ ಪಟ್ಟಣದ ಜ್ಯೋತಿನಗರದಲ್ಲಿ ಬಿಸಿ ನೀರು ಕಾಯಿಸುವ ಗ್ಯಾಸ್ ಗೀಸರ್ನ ವಿಷಕಾರಿ ಕಾರ್ಬನ್ ಮೊನಾಕ್ಸೈಡ್ ಸೋರಿಕೆಯಿಂದಾಗಿ ತಾಯಿ ಮತ್ತು ಮಗ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಶೋಭಾ (40) ಮತ್ತು ಅವರ ಪುತ್ರ ದಿಲೀಪ್ (17) ಎಂದು ಗುರುತಿಸಲಾಗಿದೆ.
ಭಾನುವಾರ ರಾತ್ರಿ ಏಳು ಗಂಟೆ ಸುಮಾರಿಗೆ ದಿಲೀಪ್ ಸ್ನಾನದ ಕೊಠಡಿಯಲ್ಲಿರುವ ಗೀಸರ್ ಸ್ವಿಚ್ಡ್ ಆನ್ ಮಾಡಿಕೊಂಡು ಸ್ನಾನಕ್ಕೆ ತೆರಳಿದ್ದರು. ಸ್ನಾನದ ಕೊಠಡಿಯಲ್ಲಿ ಕಿಟಕಿ ಇಲ್ಲದ ಕಾರಣ, ಕೊಠಡಿಯನ್ನು ಆವರಿಸಿದ ಕಾರ್ಬನ್ ಮೊನಾಕ್ಸೈಡ್ನಿಂದಾಗಿ ದಿಲೀಪ್ ಪ್ರಜ್ಞೆ ತಪ್ಪಿ ಮೃತಪಟ್ಟಿದ್ದಾರೆ. ಸ್ನಾನಕ್ಕೆ ಹೋದ ಮಗ ತುಂಬಾ ಹೊತ್ತಾದರೂ ಬರಲಿಲ್ಲವಲ್ಲ ಎಂದು ತಾಯಿ ಶೋಭಾ ಅವರು, ಸ್ನಾನದ ಕೊಠಡಿ ಬಾಗಿಲು ತೆರೆದು ಒಳ ಹೋಗಿದ್ದಾರೆ. ಆಗ ಮಗ ಕೆಳಗೆ ಬಿದ್ದಿರುವುದನ್ನು ಗಮನಿಸಿದ್ದಾರೆ. ಆತನ ಸ್ಥಿತಿ ಕಂಡು ಗಾಬರಿಗೊಂಡು, ಮಗನನ್ನು ಹೊರಕ್ಕೆ ಕರೆತರಲು ಯತ್ನಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಅವರು ಸಹ ಅನಿಲ ಸೇವಿಸಿ ಪ್ರಜ್ಞೆತಪ್ಪಿ ಕೊನೆಯುಸಿರೆಳೆದಿದ್ದಾರೆ.