ಗಂಗಾವತಿ (ಕೊಪ್ಪಳ) : ವೃತ್ತಿಯಲ್ಲಿ ಬೆಳ್ಳುಳ್ಳಿ ವ್ಯಾಪಾರಿಯಾಗಿದ್ದ ವ್ಯಕ್ತಿ, ಪ್ರವೃತ್ತಿಯಲ್ಲಿ ಕುಖ್ಯಾತ ಕಳ್ಳನಾಗಿದ್ದ. ಅಂತರ ಜಿಲ್ಲಾ ಪೊಲೀಸರಿಗೆ ಬೇಕಾಗಿದ್ದ ಆರೋಪಿಯನ್ನು ಗಂಗಾವತಿ ಪೊಲೀಸರು ಬಂಧಿಸಿ ನ್ಯಾಯಾಂಗದ ವಶಕ್ಕೆ ನೀಡಿದ್ದಾರೆ.
ಬಂಧಿತ ವ್ಯಕ್ತಿಯನ್ನು ಕನಕಗಿರಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಹಿಂಭಾಗದ ಭಜಂತ್ರಿ ಓಣಿಯ ನಿವಾಸಿ ಹನುಮೇಶ ಭಜಂತ್ರಿ ಬಸಪ್ಪ ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಬೆಳ್ಳುಳ್ಳಿ ವ್ಯಾಪಾರ ಮಾಡಿಕೊಂಡಿದ್ದ. ಆದರೆ ಗಂಗಾವತಿ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಒಂದು, ಬದಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಮತ್ತು ಹಾವೇರಿ ಜಿಲ್ಲೆಯ ಸವಣೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಒಂದು ಕೇಸ್ ಸೇರಿ ಒಟ್ಟು ನಾಲ್ಕು ಕಳ್ಳತನ ಪ್ರಕರಣಗಳಲ್ಲಿ ಈ ವ್ಯಕ್ತಿ ಬೇಕಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.