ಬೆಂಗಳೂರು : ವೃದ್ಧರನ್ನು ಗುರಿಯಾಗಿಸಿಕೊಂಡು ಎಟಿಎಂ ಯಂತ್ರಗಳ ಬಳಿ ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಪುಲಿಕೇಶಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರ ಭಾರತ ಮೂಲದ ನಯಾಜ್, ಸುಧಾಂಶು ಹಾಗೂ ರಜೀಬ್ ಬಂಧಿತ ಆರೋಪಿಗಳು. ಬಂಧಿತರನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ಪುಲಕೇಶಿ ನಗರ ಪೊಲೀಸರು ತಿಳಿಸಿದ್ದಾರೆ.
ವಂಚಿಸುತ್ತಿದ್ದದ್ದು ಹೇಗೆ?:ಜನಸಂದಣಿ ಕಡಿಮೆ ಇರುವ ಅಥವಾ ನಿರ್ಜನ ಪ್ರದೇಶಗಳಲ್ಲಿರುವ ಎಟಿಎಂಗಳ ಬಳಿ ಇರುತ್ತಿದ್ದ ಆರೋಪಿಗಳು, ಹಣ ವಿತ್ ಡ್ರಾ ಮಾಡಲು ಬರುವ ವೃದ್ಧರನ್ನ ಟಾರ್ಗೆಟ್ ಮಾಡುತ್ತಿದ್ದರು. ಹಣ ವಿತ್ ಡ್ರಾ ಮಾಡಲು ನೆರವು ಕೇಳಿದಾಗ ಅವರಿಂದ ಡೆಬಿಟ್ ಕಾರ್ಡ್ ಹಾಗೂ ಪಿನ್ ಕೇಳಿ ಪಡೆದುಕೊಳ್ಳುತ್ತಿದ್ದರು. ಆದರೆ, ತಾವು ಮೊದಲೇ ಸಿದ್ಧವಿಟ್ಟುಕೊಂಡ ನಕಲಿ ಡೆಬಿಟ್ ಕಾರ್ಡ್ ಅನ್ನ ಎಟಿಎಂ ಯಂತ್ರದಲ್ಲಿ ಸ್ವೈಪ್ ಮಾಡಿ ಪಿನ್ ನಮೂದಿಸುತ್ತಿದ್ದರು. ಆದರೆ, ಹಣ ಬರದಿದ್ದಾಗ ತಾಂತ್ರಿಕ ಸಮಸ್ಯೆಯ ನೆಪ ಹೇಳಿ ಕಳುಹಿಸುತ್ತಿದ್ದರು. ಬಳಿಕ ತಾವು ಎಗರಿಸಿಟ್ಟುಕೊಂಡಿದ್ದ ಅಸಲಿ ಡೆಬಿಟ್ ಕಾರ್ಡ್ ಸ್ವೈಪ್ ಮಾಡಿ ಹಣ ವಿತ್ ಡ್ರಾ ಮಾಡಿಕೊಂಡು ಪರಾರಿಯಾಗುತ್ತಿದ್ದರು.