ಬೆಂಗಳೂರು :ಕ್ರಿಕೆಟ್ ಸ್ಪಾನ್ಸರ್‌ಶಿಪ್ ಹೆಸರಿನಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಯೊಬ್ಬರ ಆಪ್ತ ಸಹಾಯಕನ ಸೋಗಿನಲ್ಲಿ ಕರೆ ಮಾಡಿ ವಂಚಿಸಿದ ಆರೋಪದಡಿ ಅಪರಿಚಿತನ ವಿರುದ್ಧ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನಶಂಕರಿ 2ನೇ ಹಂತದಲ್ಲಿರುವ ಸಂಗೀತಾ ಮೊಬೈಲ್ಸ್ ಶೋರೂಮ್ ಮಾಲೀಕರಾಗಿರುವ ರಾಜೇಶ್ ಕೆ.ಬಿ ನೀಡಿರುವ ದೂರಿನ ಅನ್ವಯ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ರಿಕೆಟ್ ಕಿಟ್ ಪ್ರಾಯೋಜಕತ್ವದ ಹೆಸರಿನಲ್ಲಿ ವಂಚನೆ: '2022ರ ಮೇ ತಿಂಗಳಿನಲ್ಲಿ ತಮಗೆ ಕರೆ ಮಾಡಿದ್ದ ಆಸಾಮಿ, "ತಾನು ಕೆ.ನಾಗೇಶ್ವರ ರೆಡ್ಡಿ, ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಆಂಧ್ರಪ್ರದೇಶ ಕ್ರಿಕೆಟ್ ಸಂಸ್ಥೆಯಿಂದ ಕ್ರಿಕೆಟ್ ಆಡುತ್ತಿರುವ ಕ್ರಿಕೆಟಿಗ ರಿಕ್ಕಿ ಭುಯಿಗೆ ಸ್ಪಾನ್ಸರ್‌ಶಿಪ್ ಅಗತ್ಯವಿದ್ದು, ನೀವು 2 ಕ್ರಿಕೆಟ್ ಕಿಟ್‌ನ ಮೌಲ್ಯ 10.40 ಲಕ್ಷ ಭರಿಸಿಕೊಡಬೇಕು" ಎಂದಿದ್ದ. ಆತನ ಮಾತು ನಂಬಿದ್ದ ತಾವು, ಮರುದಿನವೇ 2 ಕಂತಿನಲ್ಲಿ 10.40 ಲಕ್ಷ ರವಾನಿಸಿದ್ದೆ. ಆ ನಂತರ ಇನ್ ವಾಯ್ಸ್ ಕೊಡುವಂತೆ ಕೇಳಿದಾಗ ಒಂದಲ್ಲ ಒಂದು ಕಾರಣ ನೀಡುತ್ತಾ ಬಂದಿದ್ದ. ಕೊನೆಗೆ ಫೋನ್ ಕರೆಗಳನ್ನು ಸ್ವೀಕರಿಸದೇ ಇದ್ದಾಗ ಅನುಮಾನಗೊಂಡು ಪರಿಶೀಲಿಸಿದಾಗ, ಕೆ.ನಾಗೇಶ್ವರ ರೆಡ್ಡಿ ಮಾಜಿ ಮುಖ್ಯಮಂತ್ರಿ ಅವರ ಹೆಸರನ್ನು ಬಳಸಿಕೊಂಡು ವಂಚಿಸಿರುವುದು ಗೊತ್ತಾಗಿದೆ" ಎಂದು ರಾಜೇಶ್ ಕೆ.ಬಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ರಾಜೇಶ್ ಅವರು ನೀಡಿರುವ ದೂರಿನ ಅನ್ವಯ ಸದ್ಯ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಫೋನ್ ಕರೆ ಬಂದ ನಂಬರ್ ಹಾಗೂ ಹಣ ವರ್ಗಾವಣೆಯಾದ ಖಾತೆಯ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಜಪಾನ್ ಪ್ರಜೆಗೆ ಡಿಜಿಟಲ್ ಅರೆಸ್ಟ್: ₹35 ಲಕ್ಷ ಲೂಟಿ, ಬೆಂಗಳೂರಲ್ಲಿ ಎಫ್ಐಆರ್ ದಾಖಲು - DIGITAL ARREST