ಶಿವಮೊಗ್ಗ:ರಸ್ತೆಯಲ್ಲಿ ಓಡಾಡುವವರಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಬೈಕ್ನಿಂದ ವೀಲಿಂಗ್ ಮಾಡಬೇಡಿ ಎಂದು ಬುದ್ಧಿ ಮಾತು ಹೇಳಿದ ವ್ಯಕ್ತಿಗೆ ಚಾಕು ಇರಿದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಿನ್ನೆ ರಾತ್ರಿ ನಡೆದಿದೆ.
ಶಿಕಾರಿಪುರದ ದೊಡ್ಡಪೇಟೆ ಬಡಾವಣೆಯಲ್ಲಿ ನಡು ರಸ್ತೆಯಲ್ಲಿ ನಾಲ್ವರು ಯುವಕರು ತಮ್ಮ ಬೈಕ್ನಲ್ಲಿ ವೀಲಿಂಗ್ ಮಾಡುತ್ತಿದ್ದರು. ಇದಕ್ಕೆ ಸ್ಥಳೀಯ ನಿವಾಸಿ ಸುಶೀಲ್ ಆಕ್ಷೇಪ ವ್ಯಕ್ತಪಡಿಸಿ, ನಡು ರಸ್ತೆಯಲ್ಲಿ ವೀಲಿಂಗ್ ಮಾಡಬೇಡಿ, ಓಡಾಡುವರಿಗೆ ತೊಂದರೆ ಆಗುತ್ತದೆ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ಯುವಕರು ನಡು ರಸ್ತೆಯಲ್ಲಿಯೇ ಸುಶೀಲ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಹೊಟ್ಟೆಗೆ ಇರಿದಿದ್ದಾರೆ.
ಇದರಿಂದ ಸುಶೀಲ್ ರಸ್ತೆಯಲ್ಲಿ ಬಿದ್ದು ಒದ್ದಾಡಿದ್ದಾರೆ. ತಕ್ಷಣ ಸ್ಥಳೀಯರು ಶಿಕಾರಿಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸದ್ಯ ಸುಶೀಲ್ ಶಿವಮೊಗ್ಗ ನಗರದ ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಸ್ಪಿ ಮಿಥುನ್ ಕುಮಾರ್ ಮಾಹಿತಿ:ಕಿಡಿಗೇಡಿಗಳು ಸುಶೀಲ್ ಹೊಟ್ಟೆಗೆ ಚಾಕುವಿನಿಂದ ಎರಡು ಇಂಚು ಆಳವಾಗಿ ಚುಚ್ಚಿದ್ದಾರೆ. ಇದರಿಂದ ಕರುಳಿನ ಭಾಗಕ್ಕೆ ಸಣ್ಣ ಪ್ರಮಾಣದ ಗಾಯವಾಗಿದೆ. ಸದ್ಯ ಸುಶೀಲ್ ಆರೋಗ್ಯವಾಗಿದ್ದಾರೆ. ರಸ್ತೆಯಲ್ಲಿ ಜೋರಾಗಿ ಬೈಕ್ನಿಂದ ವಿಲೀಂಗ್ ಮಾಡುವುದನ್ನು ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಇರಿದಿದ್ದಾರೆ. ಸುಶೀಲ್ ಶಿಕಾರಿಪುರದ ಖಾಸಗಿ ಕಾಲೇಜಿನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಸುಶೀಲ್ ಆರೋಗ್ಯ ಸ್ಥಿರವಾಗಿದೆ. ಶಿಕಾರಿಪುರದ ಟೌನ್ ಪೊಲೀಸರು ನಾಲ್ವರು ಆರೋಪಿಗಳ ಪೈಕಿ ಮೂವರನ್ನು ಈಗಾಗಲೇ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ ಎಂದು ಎಸ್ಪಿ ಮಿಥುನ್ ಕುಮಾರ್ ಅವರು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಸಂಸದ ರಾಘವೇಂದ್ರ ಭೇಟಿ:ಸುಶೀಲ್ಗೆ ಯುವಕರು ಚಾಕು ಇರಿದ ಪ್ರಕರಣ ತಿಳಿಯುತ್ತಿದ್ದಂತೆಯೇ ದೊಡ್ಡಪೇಟೆಯಲ್ಲಿ ನೂರಾರು ಜನ ಜಮಾವಣೆಗೊಂಡು ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಈ ವಿಷಯ ತಿಳಿದು ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರು ಘಟನಾ ಸ್ಥಳಕ್ಕೆ ಭೇಟಿ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಸದ್ಯ ಶಿಕಾರಿಪುರ ಪಟ್ಟಣದಲ್ಲಿ ಪರಿಸ್ಥಿತಿ ಶಾಂತವಾಗಿದೆ. ಪೊಲೀಸರು ಮುಂಜಾಗ್ರತೆಯಾಗಿ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:‘ಚಲೋ ದೆಹಲಿ’: ಜಂತರ್ ಮಂತರ್ನಲ್ಲಿ ಇಂದು ಕರ್ನಾಟಕ ಕಾಂಗ್ರೆಸ್ ಪ್ರತಿಭಟನೆ