ಘಟನೆ ಬಗ್ಗೆ ಎಸ್ಪಿ ಬಿ.ಎಸ್. ನೇಮಗೌಡ ಮಾಹಿತಿ (ETV Bharat) ಗದಗ:ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಮನೆ ದೇವರ ದರ್ಶನ ಪಡೆಯಲು ಹೊರಟಿದ್ದ ಒಂದೇ ಕುಟುಂಬದ ನಾಲ್ವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದ ಹೊರವಲಯದಲ್ಲಿ ಬೆಳ್ಳಂಬೆಳಗ್ಗೆ ಸಾರಿಗೆ ಬಸ್ಗೆ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಅದರಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಹಾಗೂ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಹಾವೇರಿಯ ಮೂಲದ ರುದ್ರಪ್ಪ ಅಂಗಡಿ (58), ಪತ್ನಿ ರಾಜೇಶ್ವರಿ (50), ಮಗಳು ಐಶ್ವರ್ಯ (18) ಹಾಗೂ ಮಗ ವಿಜಯಕುಮಾರ್ (14) ಮೃತಪಟ್ಟವರು ಎಂದು ಗುರುತಿಸಲಾಗಿದೆ. ರುದ್ರಪ್ಪ ಕುಟುಂಬ ಕೊಣ್ಣೂರ ಗ್ರಾಮದ ಬಳಿಯ ಕಲ್ಲಾಪುರ ಬಸವೇಶ್ವರ ದೇವರ ದರ್ಶನ ಪಡೆಯಲು ಹೊರಟಿತ್ತು. ಸೊಲ್ಲಾಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ಕೊಣ್ಣೂರು ಸಮೀಪಿಸುತ್ತಿದ್ದಂತೆ ಕಾರು ನಿಯಂತ್ರಣ ತಪ್ಪಿ, ಎದುರುಗಡೆ ಇಳಿಕಲ್ನಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಬಸ್ಗೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ರುದ್ರಪ್ಪ ಅಂಗಡಿ, ಮಗಳು ಐಶ್ವರ್ಯ, ಮಗ ವಿಜಯ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡಿದ್ದ ಪತ್ನಿ ರಾಜೇಶ್ವರಿ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಓವರ್ ಟೇಕ್ ಮಾಡುವ ಭರದಲ್ಲಿ ಅಥವಾ ನಿದ್ರೆ ಮಂಪರಿನಲ್ಲಿ ಕಾರು ಚಲಾಯಿಸಿರುವುದೇ ದುರ್ಘಟನೆಗೆ ಕಾರಣವಿರಬಹುದು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
ಅಪಘಾತಗೊಂಡ ಬಸ್ (ETV Bharat) ಹೆದ್ದಾರಿಯಲ್ಲಿ ಎಡಭಾಗದಲ್ಲಿ ಹೊರಟಿದ್ದ ಕಾರು ಏಕಾಏಕಿ ಬಲಭಾಗಕ್ಕೆ ಬಂದಿದೆ. ಕಾರು ರಸ್ತೆ ಲೈನ್ ಬದಲಿಸುತ್ತಿದ್ದಂತೆ ಬಸ್ ಚಾಲಕ ತನ್ನ ಎಡಭಾಗದಿಂದ ಬಲಭಾಗಕ್ಕೆ ತಿರುಗಿಸಿದ್ದಾನೆ. ಆದರೂ ಕೂಡ ಕಾರು ಬಸ್ನ ಎಡಭಾಗಕ್ಕೆ ಟಚ್ ಆಗಿದೆ. ಡಿಕ್ಕಿ ರಭಸಕ್ಕೆ ಕಾರು ಯು ಟರ್ನ್ ಆಗಿ ತಿರುಗಿ ನಿಂತಿದ್ದು, ಎದುರುಗಡೆ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದರಲ್ಲಿದ್ದ ನಾಲ್ವರೂ ಕೂಡ ತೀವ್ರ ಗಾಯಗಳೊಂದಿಗೆ ಸಿಲುಕಿಕೊಂಡಿದ್ದರು.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ, ಪರಿಶೀಲನೆ ಕೈಗೊಂಡಿದ್ದಾರೆ. ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಗದಗ ಎಸ್ಪಿ ಬಿ.ಎಸ್. ನೇಮಗೌಡ ಆಗಮಿಸಿ, ಮಾಹಿತಿ ಪಡೆದರು.
ಎಸ್ಪಿ ಪ್ರತಿಕ್ರಿಯೆ:''ಬೆಳಗಿನಜಾವ ಕೆಎಸ್ಆರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಅಪಘಾತವಾಗಿದೆ. ಘಟನೆಯಲ್ಲಿ ಹಾವೇರಿಯ ಒಂದೇ ಕುಟುಂಬದ ನಾಲ್ವರು ಮೃತರಾಗಿದ್ದಾರೆ. ಇವರು ನರಗುಂದದ ಕಲ್ಲಾಪುರದ ದೇವಾಲಯಕ್ಕೆ ಹೊರಟಿದ್ದರು. ಕಾರು ಹೈವೇಯಲ್ಲಿ ಹೋಗುತ್ತಿರುವಾಗ ಓವರ್ ಟೇಕ್ ಮಾಡುವ ಯತ್ನ, ಇಲ್ಲವೇ ನಿದ್ರೆಗಣ್ಣಿನಲ್ಲಿ ಬಲಗಡೆಗೆ ಚಲಾಯಿಸಿ ಎದುರಿನಿಂದ ಬಂದ ಬಸ್ಗೆ ಡಿಕ್ಕಿ ಹೊಡೆದಿರುವಂತಿದೆ. ಇದರ ಬಗ್ಗೆ ನಿಖರ ಕಾರಣದ ಬಗ್ಗೆ ತನಿಖೆ ಮುಂದುವರೆದಿದೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ'' ಎಂದು ಗದಗ ಎಸ್ಪಿ ಬಿ.ಎಸ್. ನೇಮಗೌಡ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಸಾರಿಗೆ ಬಸ್ಗಳ ನಡುವೆ ಮುಖಾಮುಖಿ ಡಿಕ್ಕಿ: 20ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ