ಮೈಸೂರು: "ಕೆಚ್ಚಲು ಕತ್ತರಿಸಿದ, ದನ ತಿನ್ನುವ ಆ ವ್ಯಕ್ತಿಯನ್ನು ಮಾನಸಿಕ ಅಸ್ವಸ್ಥ ಎಂದು ಹೇಳುತ್ತೀರಲ್ಲ. ಇಂತಹ ಹಲಾಲ್ ಕೋರರಿಗೆ ಸಪೋರ್ಟ್ ಮಾಡುವುದನ್ನು ನಿಲ್ಲಿಸಿ ಸಿದ್ದರಾಮಯ್ಯರವರೇ. ಈ ರೀತಿಯ ಓಲೈಕೆ ನಿಮಗೆ ಶೋಭೆ ತರುವುದಿಲ್ಲ. ಆ ಹಸುವಿನ ಜೀವಕ್ಕೆ ಬೆಲೆಯಿಲ್ವಾ?" ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, "ಸಂಕ್ರಾಂತಿ ಸಂದರ್ಭದಲ್ಲಿ ಹಿಂದೂಗಳು ಎರಡನೇ ತಾಯಿ ಎಂದು ಪೂಜಿಸುವಂತಹ ಗೋಮಾತೆಯ ಕೆಚ್ಚಲನ್ನು ಕೊಯ್ದು ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ. ಇಂದು ಬೆಳಗ್ಗೆ ನಂಜನಗೂಡಿನಲ್ಲಿ ಗೋವು ಕಳ್ಳತನ ಮಾಡಲು ಬಂದಾಗ, ಗೋವು ಬೆದರಿದ್ದಕ್ಕೆ, ಅದರ ಬಾಲವನ್ನು ತುಂಡು ಮಾಡಿ ಹೋಗಿದ್ದಾರೆ. ಇಂತಹ ಕಟುಕರಿಗೆ ತಕ್ಕ ಶಾಸ್ತಿಯಾಗಬೇಕು" ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಆಗಿದ್ದೆಲ್ಲ ರಾಜ್ಯ ನೋಡಿದೆ;"ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಏನೆಲ್ಲಾ ಘಟನೆಗಳು ನಡೆದವು ಎಂದು ನೀವೆಲ್ಲ ನೋಡಿದ್ದೀರಿ. ಈಗ ಅದೇ ಪರಿಸ್ಥಿತಿ ಮುಂದುವರೆದಿದೆ. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ನಂತರ ಜೋಡೆತ್ತಿನ ಗುರುತಿನ ಚಿಹ್ನೆಯಿಟ್ಟುಕೊಂಡು ಆಡಳಿತ ನಡೆಸಿದರು. ಈಗಿನ ಸೋನಿಯಾ ಗಾಂಧಿ ನೇತೃತ್ವದಲ್ಲಿ ಆ ಚಿಹ್ನೆಯನ್ನು ತೆಗೆದು, ಮುಸಲ್ಮಾನರ ಓಲೈಕೆ ಮಾಡಲು ಪ್ರಾರಂಭ ಮಾಡಿದ್ಧಾರೆ" ಎಂದರು.
"ಸಿದ್ದರಾಮಯ್ಯ ಏನಾದರೂ ಎಐಸಿಸಿ ಅಧ್ಯಕ್ಷರಾದರೆ ಕಾಂಗ್ರೆಸ್ ಪಕ್ಷವನ್ನು ಇಬ್ಭಾಗ ಮಾಡುವುದರಲ್ಲಿ ಸಂದೇಹವೇ ಇಲ್ಲ. ಮುಂದೆ ಈ ರಾಜ್ಯದಲ್ಕಿ ನಿಮ್ಮ ತಾಲಿಬಾನಿ ಸರ್ಕಾರ ತರುವುದು ಸ್ಪಷ್ಟವಾಗಿದೆ. ಸ್ಟೇಷನ್ ಬೇಲ್ ಕೊಟ್ಟಿದ್ದಾರಲ್ಲ, ಆ ಹಸುವಿನ ಜೀವಕ್ಕೆ ಬೆಲೆಯಿಲ್ವಾ. ಹಿಂದೂಗಳಿಗಾಗಲಿ, ಅಧಿಕಾರಿಗಳಿಗಾಗಲಿ ಈ ಸರ್ಕಾರದಲ್ಲಿ ರಕ್ಷಣೆ ಇಲ್ಲ ಎಂಬುದು ಎಲ್ಲರಿಗೂ ಅರ್ಥವಾಗುತ್ತಿದೆ. ತಕ್ಷಣ ಈ ಸರ್ಕಾರ ತೊಲಗಬೇಕು" ಎಂದು ವಾಗ್ದಾಳಿ ನಡೆಸಿದರು.