ಕರ್ನಾಟಕ

karnataka

ETV Bharat / state

ಕುಮಾರಸ್ವಾಮಿ ಆರೋಪ ಬಿಟ್ಟು ಚುನಾವಣೆ ಮಾಡಲಿ : ಮಾಜಿ ಸಂಸದ ಡಿ ಕೆ ಸುರೇಶ್ - FORMER MP DK SURESH

ಮಾಜಿ ಸಂಸದ ಡಿ. ಕೆ ಸುರೇಶ್​ ಅವರು ಹೆಚ್​. ಡಿ ಕುಮಾರಸ್ವಾಮಿ ಕುರಿತು ಮಾತನಾಡಿದ್ದಾರೆ. ಅವರು ಆರೋಪ ಮಾಡುವುದನ್ನ ಬಿಟ್ಟು ಚುನಾವಣೆ ಮಾಡಲಿ ಎಂದಿದ್ದಾರೆ.

former-mp-dk-suresh
ಮಾಜಿ ಸಂಸದ ಡಿ ಕೆ ಸುರೇಶ್ (ETV Bharat)

By ETV Bharat Karnataka Team

Published : Oct 26, 2024, 8:04 PM IST

ರಾಮನಗರ :ಸಾಮಾನ್ಯ ಪರಿಜ್ಞಾನ ಇಲ್ಲದೆ ಕೇಂದ್ರ ಮಂತ್ರಿಯಾಗಿರುವ ಕುಮಾರಸ್ವಾಮಿ ಅವರು, ಆರೋಪ ಮಾಡುವುದನ್ನು ಬಿಟ್ಟು ಚುನಾವಣೆ ಮಾಡಲಿ ಎಂದು ಮಾಜಿ ಸಂಸದ ಡಿ. ಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.

ಚನ್ನಪಟ್ಟಣದ ತಿಟ್ಟಮಾರನಹಳ್ಳಿಯಲ್ಲಿ ಸುರೇಶ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. ನಿಖಿಲ್ ನಾಮಪತ್ರ ಸಲ್ಲಿಕೆ ವೇಳೆ ಜನರನ್ನು ಕರೆತಂದ ಬಸ್​ಗಳನ್ನು ಸೀಜ್ ಮಾಡಿ ಎನ್​ಸಿಆರ್ ಹಾಕಿಸಲಾಗಿದೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, ಕುಮಾರಸ್ವಾಮಿ ಅವರು ಅನೇಕ ಚುನಾವಣೆಗಳನ್ನು ಮಾಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಬಗ್ಗೆ ಅವರಿಗೂ ಜ್ಞಾನವಿದೆ. ನೀತಿ ಸಂಹಿತೆ ಸಮಯದಲ್ಲಿ ಯಾರು ಯಾವ ಪಾತ್ರ ವಹಿಸುತ್ತಾರೆ, ಪ್ರಕ್ರಿಯೆ ಹೇಗಿರುತ್ತದೆ ಎಂದು ಎಲ್ಲರಿಗೂ ಗೊತ್ತಿದೆ. ನೀತಿ ಸಂಹಿತೆ ಉಲ್ಲಂಘನೆ ಆಗಿದ್ದರೆ ಅದು ಚುನಾವಣಾ ಅಧಿಕಾರಿಗಳಿಗೆ ಸಂಬಂಧಪಟ್ಟ ವಿಚಾರ. ಅದು ನಮಗೆ ಸಂಬಂಧಿಸುವುದಿಲ್ಲ ಎಂದು ತಿಳಿಸಿದರು.

ಮಾಜಿ ಸಂಸದ ಡಿ ಕೆ ಸುರೇಶ್ (ETV Bharat)

ಕುಮಾರಸ್ವಾಮಿ ಅವರು ಆರೋಪ ಮಾಡುವುದನ್ನೇ ಅಭ್ಯಾಸ ಮಾಡಿಕೊಂಡು, ದಿನನಿತ್ಯ ಕಾಂಗ್ರೆಸ್ ವಿರುದ್ಧ ದೂಷಣೆ ಮಾಡುತ್ತಿದ್ದಾರೆ. ಅವರು ಬಸ್​ಗಳಲ್ಲಿ ಜನರನ್ನು ಕರೆ ತಂದಿದ್ದರೆ, ಅದಕ್ಕೆ ಲೆಕ್ಕ ಕೊಡಬೇಕು. ಅದಕ್ಕಾಗಿ ಅನುಮತಿ ಪಡೆಯಬೇಕು ಎಂಬ ಸಾಮಾನ್ಯ ಜ್ಞಾನ ಇಲ್ಲವಾದರೆ, ಅವರು ಹೇಗೆ ಕೇಂದ್ರ ಸಚಿವರಾಗಿದ್ದಾರೆ. ಸಂವಿಧಾನದ ಬಗ್ಗೆ ಮೊದಲು ತಿಳಿದುಕೊಳ್ಳಲಿ. ಬಸ್​ಗಳಿಗೂ ನಮಗೂ ಏನು ಸಂಬಂಧ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಮೇಲೆ ದೂಷಣೆ ಮಾಡಬೇಡಿ : ಕಾಂಗ್ರೆಸ್​ನಲ್ಲಿ ಅಭ್ಯರ್ಥಿಯಿಲ್ಲ. ಹೀಗಾಗಿ, ಯೋಗೇಶ್ವರ್ ಅವರನ್ನು ಹೈಜಾಕ್ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಕೇಳಿದಾಗ, "ಯೋಗೇಶ್ವರ್ 9 ಬಾರಿ ಚುನಾವಣೆ ಎದುರಿಸಿ ಐದು ಬಾರಿ ಶಾಸಕರಾಗಿದ್ದಾರೆ. ನಿಮ್ಮ ಮಗನನ್ನು ಚುನಾವಣೆಯಲ್ಲಿ ನಿಲ್ಲಿಸಲು ತಂತ್ರಗಾರಿಕೆ ಮಾಡಿ ಯೋಗೇಶ್ವರ್ ಅವರನ್ನು ಆಚೆ ಕಳಿಸಿದ್ದೀರಿ. ನೀವೇ ಆಚೆ ಹಾಕಿ ಈಗ ಕಾಂಗ್ರೆಸ್ ಮೇಲೆ ದೂಷಣೆ ಮಾಡಬೇಡಿ'' ಎಂದು ತಿರುಗೇಟು ನೀಡಿದರು.

ನಾವು ನಮ್ಮ ಹೋರಾಟ ಮಾಡುತ್ತಿದ್ದೇವೆ : ಷಡ್ಯಂತ್ರ ಮಾಡಿ ಒಟ್ಟಾಗಿ ಸೋಲಿಸುತ್ತಾರೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, ಷಡ್ಯಂತ್ರ ಮಾಡುತ್ತಿರುವವರು ಬಿಜೆಪಿಯವರು. ಯಡಿಯೂರಪ್ಪ ಅವರ ಮನೆಯಲ್ಲಿ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಹೇಳಲೇ? ಅವರು ಯಡಿಯೂರಪ್ಪ ಅವರ ಮನೆಗೆ ಹೋಗಿದ್ದು ಏಕೆ? ಷಡ್ಯಂತ್ರ ಮಾಡಲು ಅಲ್ಲವೇ? ಇದೆಲ್ಲವೂ ರಾಜಕಾರಣದ ಪ್ರಕ್ರಿಯೆ. ಅವರ ಕೆಲಸ ಅವರು ಮಾಡುತ್ತಾರೆ. ನಮ್ಮ ಕೆಲಸ ನಾವು ಮಾಡುತ್ತೇವೆ. ರಾಜಕಾರಣದಲ್ಲಿ ಮಗನ ಪ್ರವೇಶಕ್ಕಾಗಿ ಪ್ರವಾಸ ಮಾಡಿಸಿ ಈಗ ಚುನಾವಣೆಗೆ ನಿಲ್ಲಿಸಿದ್ದಾರೆ. ನಾವು ನಮ್ಮ ಹೋರಾಟ ಮಾಡುತ್ತಿದ್ದೇವೆ ಎಂದು ಡಿಕೆ ಸುರೇಶ್​ ಸ್ಪಷ್ಟಪಡಿಸಿದರು.

ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ: ಕ್ಷೇತ್ರದಲ್ಲಿ ಅಸಮಾಧಾನ ಇದೆಯೇ ಎಂದು ಕೇಳಿದಾಗ, ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಪಕ್ಷದಿಂದ ಯಾರೇ ಅಭ್ಯರ್ಥಿ ಮಾಡಿದರೂ ನಾನೇ ಅಭ್ಯರ್ಥಿ ಎಂದು ಹೇಳಿದ್ದಾರೆ. ಈಗಲೂ ನಾವು ಅದನ್ನೇ ಹೇಳುತ್ತಿದ್ದೇವೆ. ಇಲ್ಲಿ ಯೋಗೇಶ್ವರ್ ಅಭ್ಯರ್ಥಿಯಲ್ಲ, ಡಿ. ಕೆ ಶಿವಕುಮಾರ್ ಅಭ್ಯರ್ಥಿ. ಹೀಗಾಗಿ ಕಾಂಗ್ರೆಸ್​ಗೆ ಮತ ನೀಡಿ" ಎಂದು ಮನವಿ ಮಾಡಿದರು.

ನೀವೇ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದೀರಾ? ಎಂದು ಕೇಳಿದಾಗ, ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ನಾವು ಎಲ್ಲರೂ ಚುನಾವಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ :ನಿಖಿಲ್ ಅಭ್ಯರ್ಥಿ ಅಂತ ಎಲ್ಲರಿಗೂ ಗೊತ್ತಿತ್ತು, ಡ್ರಾಮಾ ಇನ್ಮೇಲೆ ಶುರು: ಡಿ. ಕೆ ಸುರೇಶ್

ABOUT THE AUTHOR

...view details