ಬೆಂಗಳೂರು: 'ಜಾತಿ ನಿಂದನೆ ಹಾಗೂ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿರುವ ಹಾಗೂ ಗುತ್ತಿಗೆದಾರನ ಬಳಿ ಲಂಚಕ್ಕೆ ಬೇಡಿಕೆಯಿಟ್ಟಿರುವ ಶಾಸಕ ಮುನಿರತ್ನ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸ ಬೇಕು ಹಾಗೂ ವಿಧಾನಸಭಾ ಸ್ಪೀಕರ್ ಅವರು ಶಾಸಕ ಸ್ಥಾನದಿಂದ ವಜಾ ಮಾಡಬೇಕು' ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಆಗ್ರಹಿಸಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, 'ಮುನಿರತ್ನ ಅವರಂತ ನಾಯಕರು ರಾಜ್ಯದಲ್ಲಿ ಇದ್ದರೆ ಜಾತಿ ಸಂಘರ್ಷಗಳು ಹೆಚ್ಚಾಗುತ್ತವೆ. ಆದ ಕಾರಣಕ್ಕೆ ಇವರ ಮೇಲೆ ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರಲ್ಲಿ ಮನವಿ ಮಾಡುತ್ತೇನೆ. ಬಿಜೆಪಿ ಕೇಂದ್ರ ನಾಯಕರಿಗೆ ಕಿವಿ ಕೇಳಿಸುತ್ತಿದ್ದರೆ, ಕೀಳು ಮಟ್ಟದ ಪದ ಬಳಕೆ ಮಾಡಿರುವ ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಿ. ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್ ಅವರೇ.. ಮುನಿರತ್ನ ಸಮುದಾಯದ ತಾಯಂದಿರನ್ನು ಅವಮಾನಿಸಿದ್ದಾರೆ. ಇದಕ್ಕೆ ನೀವೇ ಉತ್ತರಿಸಬೇಕು. ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಅವರು ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಇದರ ಬಗ್ಗೆ ಉತ್ತರಿಸಬೇಕು' ಎಂದು ಒತ್ತಾಯಿಸಿದರು.
ಬಾಯಲ್ಲಿ ರಾಮನ ಜಪ, ಮಹಿಳೆಯರಿಗೆ ಅಪಮಾನ: 'ಒಂದು ಕಡೆ ರಾಮನ, ಸಂಸ್ಕೃತಿಯ ಜಪ ಮಾಡುತ್ತ ಇನ್ನೊಂದು ಕಡೆ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವುದು. ಎಲ್ಲಿ, ಯಾರ ಬಳಿ ಮಾತನಾಡುತ್ತ ಇದ್ದೀನಿ ಎನ್ನುವ ಅರಿವೂ ಅವರಿಗಿಲ್ಲ. 80ರ ದಶಕದಲ್ಲಿ ದಲಿತರ ವಿರುದ್ಧ ಬಳಸುತ್ತಿದ್ದ ಪದಗಳನ್ನು ಈಗ ಬಳಸುತ್ತಾ ಇದ್ದಾರೆ. ಇಡೀ ಮಹಿಳಾ ಹಾಗೂ ತಾಯಿ ಕುಲಕ್ಕೆ ಅಪಮಾನ. ವಾರಕ್ಕೊಮ್ಮೆ ರಾಜ್ಯಕ್ಕೆ ಬಂದು ತೋಚಿದ್ದು ಮಾತನಾಡಿ ಹೋಗುವ ಕೇಂದ್ರ ಬಿಜೆಪಿ ನಾಯಕರು ಇದರ ಬಗ್ಗೆ ಉಸಿರು ಬಿಡಲಿ' ಎಂದರು.
ಕುಮಾರಸ್ವಾಮಿ ಮುನಿರತ್ನರನ್ನು ವಜಾ ಮಾಡಿಸುತ್ತಾರೆ:ಒಕ್ಕಲಿಗರನ್ನು ಅಪಮಾನ ಮಾಡಲಾಗಿದೆ ಈಗ ಸಮುದಾಯದ ಪರವಾಗಿ ಕುಮಾರಸ್ವಾಮಿ ಅವರು ನಿಲ್ಲುತ್ತಾರಾ ಎಂಬ ಪ್ರಶ್ನೆಗೆ, 'ಇದರ ಬಗ್ಗೆ ಕುಮಾರಸ್ವಾಮಿ ಏನೇನು ಹೇಳಿಕೆ ನೀಡುತ್ತಾರೆ ಎಂಬುದನ್ನು ಮಾಧ್ಯಮದವರು ಗಮನಿಸಿ ನೋಡಿ. ನರೇಂದ್ರ ಮೋದಿ ಅವರಿಗೆ ಹೇಳಿ ಪಕ್ಷದಿಂದ ಮುನಿರತ್ನರನ್ನು ವಜಾ ಮಾಡಿಸುತ್ತಾರೆ. ಕುಮಾರಸ್ವಾಮಿ ಅವರಿಗೆ ಇರುವ ತಾಕತ್ತು ನಿಮಗೆ ಗೊತ್ತಿಲ್ಲ' ಎಂದು ಕುಟುಕಿದರು.