ಬೆಂಗಳೂರು :ಆರ್. ಆರ್ ನಗರ ಶಾಸಕ ಮುನಿರತ್ನ ವಿರುದ್ಧ ಅಕ್ರಮವಾಗಿ ವೋಟರ್ ಐಡಿ ಸಂಗ್ರಹ ಪ್ರಕರಣ ಸಂಬಂಧ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದ್ದರೂ, ವಿಳಂಬ ಧೋರಣೆ ತೋರಿ ನ್ಯಾಯಯುತವಾಗಿ ತನಿಖೆ ನಡೆಸಿಲ್ಲ ಎಂದು ಬಿಜೆಪಿ ಮಾಜಿ ವಿಧಾನಪರಿಷತ್ ಸದಸ್ಯ ತುಳಸಿ ಮುನಿರಾಜ್ ಆರೋಪಿಸಿದ್ದು, ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
2018ರ ವಿಧಾನಸಭಾ ಚುನಾವಣೆ ವೇಳೆ ಜಾಲಹಳ್ಳಿಯ ಮನೆಯೊಂದರಲ್ಲಿ ನೂರಾರು ವೋಟರ್ ಐಡಿ ಪತ್ತೆಯಾಗಿದ್ದವು. ಈ ಸಂಬಂಧ ರಾಕೇಶ್ ಎಂಬುವರು ನೀಡಿದ ದೂರನ್ನು ಆಧರಿಸಿ ಜಾಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಮುನಿರತ್ನ ಅವರ ಹೆಸರು ಬಿಡಲಾಗಿತ್ತು. ಅಲ್ಲದೆ, ಸಾಕ್ಷಿದಾರರ ಹೇಳಿಕೆ ದಾಖಲಿಸಿಕೊಂಡಿಲ್ಲ. ಮೂರೂವರೆ ವರ್ಷಗಳ ಹಿಂದೆ ಐಪಿಎಸ್ ಅಧಿಕಾರಿ ಮಟ್ಟದಲ್ಲಿ ತನಿಖೆ ನಡೆಸುವಂತೆ ತೀರ್ಪು ನೀಡಿದ್ದರೂ ಸಮಗ್ರವಾಗಿ ತನಿಖೆ ನಡೆಸಿಲ್ಲ ಎಂದು ದೂರಿನಲ್ಲಿ ಮುನಿರಾಜು ಆರೋಪಿಸಿದ್ದಾರೆ.