ಕರ್ನಾಟಕ

karnataka

ETV Bharat / state

ನಾನು ಸುರೇಶ್​ರನ್ನು ಗುಂಡಿಕ್ಕಿ‌ ಕೊಲ್ಲಿ ಎಂದು ಎಲ್ಲೂ ಹೇಳಿಲ್ಲ, ಪೊಲೀಸರ ನೋಟಿಸ್​ಗೆ ಹೆದರಲ್ಲ: ಈಶ್ವರಪ್ಪ

ದೇಶದ್ರೋಹಿ ಹೇಳಿಕೆ‌ ನೀಡುವವರನ್ನು ಗುಂಡಿಕ್ಕಿ‌ ಕೊಲ್ಲುವ ಸಂಬಂಧ ಕಾನೂನು ಜಾರಿಗೆ ತರಬೇಕೆಂದು ನಾಳೆಯೇ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯುತ್ತೆನೆ ಎಂದು ಮಾಜಿ ಸಚಿವ ಈಶ್ವರಪ್ಪ ತಿಳಿಸಿದ್ದಾರೆ. ಇದೇ ವೇಳೆ ಸಂಸದ ಡಿ ಕೆ ಸುರೇಶ್​ ಅವರ ಕುರಿತು ನೀಡಿದ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

Etv Bharatformer-minister-ks-eshwarappa-reaction-on-d-k-suresh
ವೈಯಕ್ತಿಕವಾಗಿ ಸುರೇಶ್​ಗೂ ನನಗೂ ಯಾವುದೇ ದ್ವೇಷ ಇಲ್ಲ, ಪೊಲೀಸರ ನೋಟಿಸ್​ಗೆ ಹೆದರಲ್ಲ: ಈಶ್ವರಪ್ಪ

By ETV Bharat Karnataka Team

Published : Feb 10, 2024, 4:55 PM IST

Updated : Feb 10, 2024, 6:06 PM IST

ಮಾಜಿ ಸಚಿವ ಈಶ್ವರಪ್ಪ

ಶಿವಮೊಗ್ಗ: "ನನಗೆ ಪೊಲೀಸರ 100 ನೋಟಿಸ್ ಬಂದರು ಸಹ ಹೆದರುವುದಿಲ್ಲ" ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ದಾವಣಗೆರೆ ಪೊಲೀಸರು ತಮಗೆ ವಿಚಾರಣೆಗೆ ಹಾಜರಾಗುವಂತೆ ನೀಡಿರುವ ನೋಟಿಸ್ ಕುರಿತು ಮಾತನಾಡಿದ ಅವರು, "ಕರ್ನಾಟಕ ಕಾಂಗ್ರೆಸ್ ಸರ್ಕಾರ ಹೇಗಾಗಿದೆ ಅಂದರೆ, ದಕ್ಷಿಣ ಭಾರತ ರಾಷ್ಟ್ರವಾಗಿ ಕೇಳುತ್ತೇವೆ ಎಂದು ಹೇಳುವ ರಾಷ್ಟ್ರದ್ರೋಹಿಗಳಿಗೆ ಯಾವ ನೋಟಿಸ್, ಎಫ್ಐಆರ್ ಇಲ್ಲ. ಯಾರು ದೇಶವನ್ನು ವಿಭಜನೆ ಮಾಡುವ ಹೇಳಿಕೆ ನೀಡುತ್ತಾರೋ ಅಂತವರಿಗೆ ಗುಂಡಿಕ್ಕುವ ಕಾನೂನು ತರಬೇಕೆಂದು ಪ್ರಧಾನಿಯವರಿಗೆ ಹೇಳುವಂತ ವ್ಯಕ್ತಿಗಳ ಮೇಲೆ ಎಫ್​ಐಆರ್ ಹಾಗೂ ಪೊಲೀಸರ ನೋಟಿಸ್ ಬರುತ್ತಿದೆ" ಎಂದರು.

"ಡಿ ಕೆ ಸುರೇಶ್ ತಮ್ಮ ಹೇಳಿಕೆಯಲ್ಲಿ ದಕ್ಷಿಣ ಭಾರತಕ್ಕೆ ಅನುದಾನ ಕೊಡದೆ ಇದ್ದರೆ ದಕ್ಷಿಣ ಭಾರತ ರಾಷ್ಟ್ರ ಕೇಳಬೇಕಾಗುತ್ತದೆ ಎಂಬ ಹೇಳಿಕೆಗಿಂತ ದೇಶದ್ರೋಹ ಹೇಳಿಕೆ ಇನ್ನೂಂದು ಇಲ್ಲ. ಅವರ ಮೇಲೆ ಈವರೆಗೆ ಒಂದೂ ಎಫ್​ಐಆರ್ ಹಾಕಿಲ್ಲ, ನೋಟಿಸ್ ಕೊಟ್ಟಿಲ್ಲ. ನಾನು ಈ ರೀತಿ ದೇಶ ವಿಭಜನೆ ಮಾಡುವ ಹೇಳಿಕೆ‌ ಕೊಡುತ್ತಿರುವ ಬಗ್ಗೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕೈಮುಗಿದು ಕೇಳುತ್ತೇನೆ.‌ ದೇಶದ್ರೋಹ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತೆಗೆದುಕೊಂಡು ಬನ್ನಿ ಎಂದಿದ್ದು ಕರ್ನಾಟಕ ಸರ್ಕಾರದಲ್ಲಿ ತಪ್ಪು" ಎಂದು ಹೇಳಿದರು.

"ದೇಶ ವಿಭಜನೆ ಮಾಡುವ ಹೇಳಿಕೆ‌ ನೀಡಿದವರಿಗೆ ನೋಟಿಸ್ ನೀಡಬೇಕೋ ಅಥವಾ ಇಂತಹ ಹೇಳಿಕೆ ನೀಡಿದ ರಾಷ್ಟ್ರದ್ರೋಹಿಗಳಿಗೆ ಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿ ಎಂದು ಪ್ರಧಾನಿಗೆ ಮನವಿ ಮಾಡಿದ್ದು ತಪ್ಪೋ. ಇದನ್ನು ನಾನು ರಾಜ್ಯದ ಜನತೆಯ ತೀರ್ಮಾನಕ್ಕೆ ಬಿಡುತ್ತಿನಿ. ಈ ಕುರಿತು ಕಾಂಗ್ರೆಸ್ ನವರು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ನಾನು ಡಿ ಕೆ ಸುರೇಶ್ ರನ್ನು ಗುಂಡಿಕ್ಕಿ‌ ಕೊಲ್ಲಿ ಎಂದು ಎಲ್ಲೂ ಹೇಳಿಲ್ಲ" ಎಂದು ಸ್ಪಷ್ಟನೆ ನೀಡಿದರು.

ನಾನು 1 ರೂಪಾಯಿ ದಂಡ ಕಟ್ಟಿಲ್ಲ, ಒಂದು ದಿನ ಜೈಲಿಗೆ ಹೋಗಿಲ್ಲ - ಈಶ್ವರಪ್ಪ: "ನನಗೆ ದಾವಣಗೆರೆಗೆ ವಿಚಾರಣೆಗೆ ಬರುವಂತೆ ಹೇಳಿದ್ದಾರೆ. ನಾನು ಇಂತಹ ನೋಟಿಸ್​ಗೆ ಹೆದರುವುದಿಲ್ಲ. ನನ್ನ ವಿರುದ್ಧ ದಾಖಲಾದ ಯಾವ ಪ್ರಕರಣದಲ್ಲಿ ನನಗೆ ಶಿಕ್ಷೆ ಆಗಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸುರ್ಜೇವಾಲಾ ಅವರಿಗೆ 10 ಸಾವಿರ ದಂಡ ಕಟ್ಟಿ ಅಂತಾ ಕೋರ್ಟ್ ಹೇಳಿದೆ. ನನಗೆ ದಂಡ ಕಟ್ಟುವ ಪ್ರಸಂಗ ಬಂದಿಲ್ಲ. ಡಿಸಿಎಂ ಡಿ ಕೆ ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿ ಬಂದಿದ್ದಾರೆ. ಅವರು ಸುರೇಶ್ ಕೊಟ್ಟಿರುವ ಹೇಳಿಕೆ ಸರಿ ಇದೆಯಾ ಅಂತಾ ಸ್ಪಷ್ಟಪಡಿಸಲಿ. ನಾನು ಬೇಕಾದಷ್ಟು ಹೇಳಿಕೆ ಕೊಟ್ಟಿದ್ದೇನೆ. ಒಂದೇ ಒಂದು ರೂಪಾಯಿ ಪೆನಾಲ್ಟಿ ಕಟ್ಟಿಲ್ಲ. ಒಂದೇ ಒಂದು ದಿನ ಜೈಲಿಗೆ ಹೋಗಿಲ್ಲ" ಎಂದು ಹೇಳಿದರು.

ಡಿ ಕೆ ಸುರೇಶ್ ಬಗ್ಗೆ ವೈಯಕ್ತಿಕ ದ್ವೇಷ ಇಲ್ಲ: "ಡಿ ಕೆ ಸುರೇಶ್ ಅವರೇ ನಿಮ್ಮ ಮೇಲೆ ನನಗೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ಆದರೆ, ನಿಮ್ಮ ಹೇಳಿಕೆ ವಿರುದ್ಧ ನಾವಿದ್ದೇವೆ. ಇದು ರಾಷ್ಟದ್ರೋಹಿ ಹೇಳಿಕೆ ಅಂತ ಅನ್ನಿಸುವುದಿಲ್ಲವೇ. ದೇಶವನ್ನು ವಿಭಜನೆ ಮಾಡುವ ಹೇಳಿಕೆ ರಾಷ್ಟ್ರದ್ರೋಹಿ ಹೇಳಿಕೆ ಅಲ್ವಾ. ನಿಮ್ಮನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬ ಮಾತನ್ನು ಹೇಳಿಲ್ಲ. ಹೇಳೋದು ಇಲ್ಲ. ಆದರೆ, ನಿಮ್ಮಂತೆ, ರಾಷ್ಟ್ರ ವಿಭಜನೆ ಮಾಡುವ ದೇಶದ್ರೋಹಿಗಳಿಗೆ ಗುಂಡಿಕ್ಕಿ‌ಕೊಲ್ಲಬೇಕು ಎಂಬ ಕಾನೂನು ತೆಗೆದುಕೊಂಡು ಬನ್ನಿ ಅಂತ ಪ್ರಾರ್ಥನೆಯನ್ನು ಪ್ರಧಾನಿ‌ ನರೇಂದ್ರ ಮೋದಿ ಅವರಿಗೆ ಮಾಡಿದ್ದು ಹೌದು, ನಾನು ನನ್ನ ಹೇಳಿಕೆಗೆ ಬದ್ಧ" ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.

"ಕಾಂಗ್ರೆಸ್ ನವರು ಡಿ ಕೆ ಸುರೇಶ್ ಮೇಲೆ ಇರುವ ಭಯವನ್ನು ಬಿಟ್ಟು, ಅವರು ಕೊಟ್ಟಿರುವ ಹೇಳಿಕೆ ನಿಮ್ಮ ಮನಸ್ಸು ಒಪ್ಪುತ್ತಾ ಹೇಳಿ. ಇಂದು ಅಧಿಕಾರ ಬೇಕು ಎಂಬ ಒಂದೇ ಕಾರಣಕ್ಕೆ ಅವರು ನೀಡಿರುವ ಹೇಳಿಕೆಯನ್ನು ತಿರುಚುವ ಪ್ರಯತ್ನ ಏನು ಮಾಡುತ್ತಿದ್ದೀರಿ. ವೈಯಕ್ತಿಕವಾಗಿ ನನಗೂ ಡಿ ಕೆ ಸುರೇಶ್​ಗೂ ಯಾವುದೇ ದ್ವೇಷ ಇಲ್ಲ. ಇಲ್ಲಿ ರಾಷ್ಟ್ರ ಭಕ್ತಿ, ರಾಷ್ಟ್ರದ್ರೋಹದ ಬಗ್ಗೆ ಚರ್ಚೆ ಆಗುತ್ತಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಒಂದೇ ಭಾರತ ಅಂತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಡಿ ಕೆ ಸುರೇಶ್ ಅವರ ಹೇಳಿದ್ದು ತಪ್ಪು ಅಂತ ಅನ್ನಿಸಿದರೆ ಸಿದ್ದರಾಮಯ್ಯನವರೆ ಡಿ ಕೆ ಸುರೇಶ್ ಮೇಲೂ ಎಫ್​ಐಆರ್ ಹಾಕಿ" ಎಂದು ಸವಾಲು ಹಾಕಿದರು.

ಪ್ರಧಾನಿಗೆ ಪತ್ರ ಬರೆಯುತ್ತೇನೆ: "ದೇಶದ್ರೋಹಿ ಹೇಳಿಕೆ‌ ನೀಡುವವರನ್ನು ಗುಂಡಿಕ್ಕಿ‌ ಕೊಲ್ಲುವ ಸಂಬಂಧ ಕಾನೂನು ಜಾರಿಗೆ ತರಬೇಕೆಂದು ನಾಳೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುತ್ತೇನೆ" ಎಂದು ಈಶ್ವರಪ್ಪ ತಿಳಿಸಿದ್ದಾರೆ.

ಇದಕ್ಕೂ ಮುನ್ನ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯ ಎಎಸ್ಐ ಒಬ್ಬರು ಈಶ್ವರಪ್ಪನವರ ಶಿವಮೊಗ್ಗದ ಮಲ್ಲೇಶ್ವರ ನಗರದ ಮನೆಗೆ ಬಂದು ಪೊಲೀಸ್ ಠಾಣೆಗೆ ವಿಚಾರಣೆಗೆ ಬರುವಂತೆ ನೋಟಿಸ್ ‌ನೀಡಿ ತೆರಳಿದ್ದಾರೆ.

ಇದನ್ನೂ ಓದಿ:ಈಶ್ವರಪ್ಪ ಅವರ ಮನೆಗೆ ನಾನೇ ಹೋಗ್ತೀನಿ, ಅವರೇ ನನಗೆ ಗುಂಡು ಹೊಡೆಯಲಿ: ಡಿಕೆ ಸುರೇಶ್

Last Updated : Feb 10, 2024, 6:06 PM IST

ABOUT THE AUTHOR

...view details