ಬಳ್ಳಾರಿ :''ರಾಜ್ಯ ಸರ್ಕಾರ ಮಾಡುತ್ತಿರುವ ಭ್ರಷ್ಟಾಚಾರ ಮುಚ್ಚಿಹಾಕಲು ನನ್ನ ಹಾಗೂ ಯಡಿಯೂರಪ್ಪ ಮೇಲೆ ಪ್ರಾಸಿಕ್ಯೂಷನ್ಗೆ ಕೊಡಲು ಹೊರಟಿದ್ದಾರೆ'' ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದ್ದಾರೆ.
ಸಂಡೂರು ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''2020ರಲ್ಲಿ ಕಲಬುರಗಿಯಿಂದ ಕೊರೊನಾ ಸೋಂಕು ರಾಜ್ಯದ ತುಂಬೆಲ್ಲಾ ಹರಡಿತ್ತು. ಆಗ ನಾನೇ ಆರೋಗ್ಯ ಸಚಿವನಾಗಿದ್ದೆ. ಯಡಿಯೂರಪ್ಪ ಸಿಎಂ ಆಗಿದ್ದರು. ಆಗ ನಾವೊಂದು ಟಾಸ್ಕ್ ಫೋರ್ಸ್ ಮಾಡಿಕೊಂಡಿದ್ದೆವು. ಅದರಲ್ಲಿ ನಾವು ಎಲ್ಲಾ ವಿಚಾರಗಳನ್ನು ಚರ್ಚೆ ಮಾಡುತ್ತಿದ್ದೆವು. ಆದರೆ ದಿನಕ್ಕೊಂದು ಭ್ರಷ್ಟಾಚಾರ ಮಾಡಿಕೊಂಡು ಈ ಸರ್ಕಾರ ನಡೆಯುತ್ತಿದೆ. ಇದನ್ನು ಮುಚ್ಚಿಹಾಕಬೇಕೆಂದು ನಮ್ಮ ಮೇಲೆ ಪ್ರಾಸಿಕ್ಯೂಷನ್ಗೆ ಹೊರಟಿದ್ದಾರೆ'' ಎಂದರು.
ಬಿ. ಶ್ರೀರಾಮುಲು ಪ್ರತಿಕ್ರಿಯೆ (ETV Bharat) ಜನರ ಪ್ರಾಣ ಉಳಿಸಿದ್ದೇವೆ :''ನಾವು ಈ ಗೊಡ್ಡು ಬೆದರಿಕೆಗೆ ಭಯಬೀಳುವ ನಾಯಕರಲ್ಲ, ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಆವತ್ತಿನ ಸಂದರ್ಭದಲ್ಲಿ ಜನರ ಪ್ರಾಣ ಉಳಿಸಿದ್ದೇವೆ. ನಾವು ಎಂಬುದಕ್ಕಿಂತ ದೇವರ ಜೊತೆ ಅಂದು ನಾವು ಕೆಲಸ ಮಾಡಿದ್ದೇವೆ. ಅವರು ಏನು ಮಾಡ್ತಾರೋ ಮಾಡಲಿ. ಅವರ ರೀತಿ ಭ್ರಷ್ಟಾಚಾರ ಮಾಡಿಕೊಂಡು ಬದುಕುವ ಪರಿಸ್ಥಿತಿ ನಮಗೆ ಬಂದಿಲ್ಲ'' ಎಂದು ತಿರುಗೇಟು ನೀಡಿದರು.
''ವಾಲ್ಮೀಕಿ ನಿಗಮದ 187 ಕೋಟಿ ರೂ.ಗಳನ್ನು ಇದೇ ಜಿಲ್ಲೆಯ ಉಸ್ತುವಾರಿ ನಾಗೇಂದ್ರ ಅವರು ತಿಂದಿದ್ದಾರೆ. ಈ ಹಣ ಯಾವುದಕ್ಕೆ ಬಳಕೆ ಆಗಬೇಕಿತ್ತು. ಹೇಗೆ ಭ್ರಷ್ಟಾಚಾರ ಮಾಡಿದ್ದಾರೆ ಎಂಬುದನ್ನ ಪ್ರತಿಯೊಬ್ಬರಿಗೂ ತಲೆಯೊಳಗೆ ತೂರುವಂತೆ ನಾವು ಜನರಿಗೆ ತಿಳಿಸುತ್ತಿದ್ದೇವೆ'' ಎಂದು ಕಿಡಿಕಾರಿದರು.
ರಾಜಕೀಯ ನಿವೃತ್ತಿ ಪಡೆಯುತ್ತೇನೆ :''ಇದನ್ನೆಲ್ಲಾ ಮುಚ್ಚಿ ಹಾಕೋಕೆ ಇವತ್ತು ಕೋವಿಡ್ ಹಗರಣ ಎಂದು ಹೇಳುತ್ತಿದ್ದಾರೆ. ನಿಮ್ಮ ಸರ್ಕಾರ ಬಂದು ಒಂದೂವರೆ ವರ್ಷ ಆಯ್ತಲ್ಲ, ನೀವು ಇಷ್ಟು ಕಾಲ ಏನು ಮಾಡುತ್ತಿದ್ರಿ?. ನಮ್ಮ ಮೇಲೆ ಒಂದೇ ಒಂದು ಆರೋಪ ಸಾಬೀತು ಮಾಡಲಿ, ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ'' ಎಂದು ಶ್ರೀರಾಮುಲು ಹೇಳಿದರು.
ಕಾನೂನು ಹೋರಾಟ: ''ಕೋವಿಡ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರು ಮಾರ್ಗದರ್ಶನ ಮಾಡುತ್ತಿದ್ದರು. ಅದರಂತೆ ನಾವು ಕೆಲಸ ಮಾಡುತ್ತಿದ್ದೆವು. ಇದು ದ್ವೇಷದ ರಾಜಕಾರಣ. ಇದಕ್ಕಿಂತ ಮುಂಚೆ ನಾವು ಬೇರೆ ಬೇರೆ ರಾಜ್ಯದಲ್ಲಿ ದ್ವೇಷದ ರಾಜಕಾರಣ ನೋಡುತ್ತಿದ್ದೆವು. ರಿಜನಲ್ ಪಾರ್ಟಿಗಳು ದ್ವೇಷದ ರಾಜಕಾರಣ ಮಾಡುತ್ತವೆ. ಆದರೆ ನ್ಯಾಷನಲ್ ಪಾರ್ಟಿ ಇದೇ ಮೊದಲ ಬಾರಿಗೆ ಹೀಗೆ ಮಾಡುತ್ತಿದೆ. ನಾವು ಕಾನೂನು ಹೋರಾಟ ಮಾಡುತ್ತೇವೆ'' ಎಂದು ತಿಳಿಸಿದರು.
ಇದನ್ನೂ ಓದಿ :ಕೋವಿಡ್ ಅಕ್ರಮ: ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ಗೆ ಶಿಫಾರಸು - ಸಚಿವ ದಿನೇಶ್ ಗುಂಡೂರಾವ್