ಕರ್ನಾಟಕ

karnataka

ETV Bharat / state

ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣ: ಮಾಜಿ ಸಚಿವ ಬಿ.ನಾಗೇಂದ್ರ ಬಂಧನ - ED ARREST B NAGENDRA - ED ARREST B NAGENDRA

ವಾಲ್ಮೀಕಿ ‌ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಜಿ‌ ಸಚಿವ ಬಿ.ನಾಗೇಂದ್ರ ಅವರನ್ನು ಬಂಧಿಸಿದೆ.

Nagendra
ಮಾಜಿ ಸಚಿವ ಬಿ.ನಾಗೇಂದ್ರ (ANI)

By ETV Bharat Karnataka Team

Published : Jul 12, 2024, 9:25 AM IST

Updated : Jul 12, 2024, 8:23 PM IST

ಬೆಂಗಳೂರು:ವಾಲ್ಮೀಕಿ ‌ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಜಿ‌ ಸಚಿವ ಬಿ.ನಾಗೇಂದ್ರ ಅವರನ್ನು ಬಂಧಿಸಿದ್ದಾರೆ. ಸುದೀರ್ಘ ಎರಡು ದಿನಗಳ ತಪಾಸಣೆ ಬಳಿಕ ಬೆಂಗಳೂರಿನ ಡಾಲರ್ಸ್ ಕಾಲೊನಿಯ ನಿವಾಸದಲ್ಲಿ ನಾಗೇಂದ್ರರನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಹಾಗೂ ಬಳ್ಳಾರಿಯಲ್ಲಿರುವ ಬಿ.ನಾಗೇಂದ್ರ ಅವರ ನಿವಾಸ ಹಾಗೂ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ನಿವಾಸಗಳ ಮೇಲೆ ಬುಧವಾರ ಬೆಳಗಿನ ಜಾವ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಗುರುವಾರ ಸಹ ಇ.ಡಿ ಶೋಧ ಕಾರ್ಯ ಮುಂದುವರೆದಿತ್ತು. ಶುಕ್ರವಾರ ಮುಂಜಾನೆ ನಾಗೇಂದ್ರ ಅವರನ್ನು ಬಂಧಿಸಿದ ಇ.ಡಿ ಅಧಿಕಾರಿಗಳು, ಶಾಂತಿನಗರದಲ್ಲಿರುವ ತಮ್ಮ ಕಚೇರಿಗೆ ಕರೆದೊಯ್ದರು. ಸದ್ಯ ವಿಚಾರಣೆ ಕೂಡ ನಡೆಸಿದ್ದಾರೆ.

ನಿಗಮದಲ್ಲಿ ಬಹುಕೋಟಿ ಹಣ ಅಕ್ರಮವಾಗಿ ವರ್ಗಾವಣೆಯಾಗಿರುವ ಆರೋಪ ಹಿನ್ನೆಲೆಯಲ್ಲಿ ಇ.ಡಿ ಸಹ ತನಿಖೆ ನಡೆಸುತ್ತಿದೆ. ಬುಧವಾರ ಬೆಳಗ್ಗೆಯೇ ನಾಗೇಂದ್ರ ಹಾಗೂ ಶಾಸಕ ಬಸನಗೌಡ ದದ್ದಲ್ ಮನೆ ಮೇಲೆ ದಾಳಿ ನಡೆಸಿದ್ದ ಇ.ಡಿ, ಸುಮಾರು 48 ಗಂಟೆಗಳಿಗೂ ಅಧಿಕ ಸಮಯ ಪರಿಶೀಲನೆ ನಡೆಸಿತ್ತು. ಇದೇ ವೇಳೆ ಬೆಂಗಳೂರಿನಲ್ಲಿ‌ ನಾಗೇಂದ್ರ ಅವರ ಆಪ್ತ ಹರೀಶ್ ಎಂಬುವರನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಹರೀಶ್ ನೀಡಿದ ಕೆಲ ಮಾಹಿತಿ ಆಧಾರದ ಮೇಲೆ ಇಂದು ನಾಗೇಂದ್ರ ಅವರನ್ನು ವಶಕ್ಕೆ ಪಡೆದುಕೊಂಡಿದ್ದು, ಇಡಿ ಅಧಿಕಾರಿಗಳಿಂದ ತನಿಖೆ ಮುಂದುವರೆದಿದೆ.

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಲೆಕ್ಕಪರಿಶೋಧಕರಾಗಿದ್ದ ಚಂದ್ರಶೇಖರನ್ ಅವರು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿತ್ತು. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಚಂದ್ರಶೇಖರನ್, ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಹಾಗೂ ಅನುದಾನದ ದುರುಪಯೋಗದ ಆರೋಪ ಮಾಡಿದ್ದರು. ಅಷ್ಟೇ ಅಲ್ಲ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾಗಿದ್ದ ಶಾಸಕ ಬಿ.ನಾಗೇಂದ್ರ ಅವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದ್ದವು. ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ:ವಾಲ್ಮೀಕಿ ನಿಗಮ ಹಗರಣ: ಯೂನಿಯನ್ ಬ್ಯಾಂಕ್​ ಮ್ಯಾನೇಜರ್ ಮನೆ ಜಪ್ತಿ ಮಾಡಿದ CBI, ನಾಗೇಂದ್ರ ಆಪ್ತ ED ವಶಕ್ಕೆ - valmiki nigam scam

Last Updated : Jul 12, 2024, 8:23 PM IST

ABOUT THE AUTHOR

...view details