ಕರ್ನಾಟಕ

karnataka

ETV Bharat / state

'ಅಧಿಕೃತ ಶಾಲೆಗಳ ಪಟ್ಟಿ ಪ್ರಕಟಿಸುವಂತೆ ಬಿಇಒಗಳಿಗೆ ಸೂಚಿಸಿ': ಶಿಕ್ಷಣ ಇಲಾಖೆಗೆ ಸುರೇಶ್ ಕುಮಾರ್ ಪತ್ರ - letter to Education Department - LETTER TO EDUCATION DEPARTMENT

ರಾಜ್ಯದ ಎಲ್ಲಾ ಜಿಲ್ಲೆಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಮಾಜಿ ಸಚಿವ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.

ಶಿಕ್ಷಣ ಇಲಾಖೆಗೆ ಸುರೇಶ್ ಕುಮಾರ್ ಪತ್ರ
ಶಿಕ್ಷಣ ಇಲಾಖೆಗೆ ಸುರೇಶ್ ಕುಮಾರ್ ಪತ್ರ (ETV Bharat)

By ETV Bharat Karnataka Team

Published : May 6, 2024, 7:52 PM IST

ಬೆಂಗಳೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಾರಂಭಕ್ಕೆ ಕೆಲ ದಿನಗಳಷ್ಟೇ ಬಾಕಿ ಇದ್ದು, ಕೂಡಲೇ ರಾಜ್ಯದ ಎಲ್ಲಾ ಜಿಲ್ಲೆಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ) ಅಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸುವಂತೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಆಯಾ ಜಿಲ್ಲೆಗಳ ಪ್ರಮುಖ ಪತ್ರಿಕೆಗಳಲ್ಲಿ ಈ ಪಟ್ಟಿ ಪ್ರಕಟವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ (ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ) ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿರುವ 17,329 ಖಾಸಗಿ ಶಾಲೆಗಳ ಪೈಕಿ 1,695 ಅನಧಿಕೃತ ಶಾಲೆಗಳಿವೆ ಎಂದು ಸರ್ಕಾರದ ಅಂಕಿ - ಅಂಶಗಳು ತಿಳಿಸಿವೆ. ಅನೇಕ ಪಾಲಕರಿಗೆ ತಮ್ಮ ಮಕ್ಕಳು ಕಲಿಯುತ್ತಿರುವ ಶಾಲೆ ಅಧಿಕೃತವೇ ಅಥವಾ ಅನಧಿಕೃತವೇ ಎಂಬುದರ ಬಗ್ಗೆ ಖಚಿತ ಮಾಹಿತಿಯೇ ಇರುವುದಿಲ್ಲ. ಈಗಾಗಲೇ 2024-25ನೇ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಸಹಜವಾಗಿ ಪಾಲಕರಿಗೆ ತಮ್ಮ ಮಕ್ಕಳನ್ನು ಉತ್ತಮ ಶಾಲೆಗಳಿಗೆ ಸೇರಿಸುವ ಧಾವಂತ.

ಆದರೆ, ಈ ಪಾಲಕರ ನಂಬಿಕೆಗೆ ಅನುಗುಣವಾಗಿ ಇರುವ ಶಾಲೆಗಳೆಷ್ಟು? ಶಾಲಾ ನೋಂದಣಿ ಅನುಮತಿ ಪಡೆಯದೇ ಇರುವುದು, ನೋಂದಣಿ ಇಲ್ಲದೆಯೇ ತರಗತಿಗಳನ್ನು ಉನ್ನತೀಕರಿಸಿರುವುದು, ಶಾಲಾ ಪಠ್ಯಕ್ರಮ ಅನುಮತಿ ಪಡೆದು ಬೇರೆ ಪಠ್ಯಕ್ರಮ ಬೋಧನೆ ಮಾಡುವುದು, ಅನುಮತಿ ಇಲ್ಲದ ಮಾಧ್ಯಮ ಬೋಧನೆ ಮಾಡುವುದು, ಒಪ್ಪಿಗೆ ಪಡೆಯದೇ ಹೆಚ್ಚುವರಿ ವಿಭಾಗಗಳನ್ನು ಹೊಂದಿರುವುದು ಸೇರಿದಂತೆ ವಿವಿಧ ರೀತಿಯಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಖಾಸಗಿ ಶಾಲೆಗಳನ್ನು ಶಿಕ್ಷಣ ಇಲಾಖೆಯೇ ಅನಧಿಕೃತ ಎಂದು ಘೋಷಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಮ್ಮ ಮಕ್ಕಳು ಸೇರುವ ಶಾಲೆ ಅಧಿಕೃತವೋ ಅಥವಾ ಅನಧಿಕೃತವೋ ಎಂಬುದನ್ನು ತಿಳಿಯುವ ಹಕ್ಕು ಪಾಲಕರಿಗೆ ಇದೆ. ಅದನ್ನು ತಿಳಿಸುವ ಕರ್ತವ್ಯ ಶಿಕ್ಷಣ ಇಲಾಖೆಗೆ ಇದೆ. ಈ ನಿಟ್ಟಿನಲ್ಲಿ ಸರ್ಕಾರವೇ ಅಧಿಕೃತ ಶಾಲೆಗಳ ಪಟ್ಟಿಯನ್ನು ಏಪ್ರಿಲ್ 24 ರೊಳಗೆ ರಾಜ್ಯದ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಒ) ಕಚೇರಿಗಳ ಸೂಚನಾ ಫಲಕಗಳಲ್ಲಿ ಪ್ರಕಟಿಸುವಂತೆ ನಿರ್ದೇಶನ ನೀಡಿತ್ತು. ಇದರಿಂದ ಅಧಿಕೃತ ಶಾಲೆಗಳು ಯಾವುವು ಎಂಬುದನ್ನು ಪತ್ತೆ ಹಚ್ಚಲು ಪಾಲಕರಿಗೆ ಸುಲಭವಾಗುತ್ತದೆ ಎಂಬ ಶಿಕ್ಷಣ ಇಲಾಖೆಯ ಆಲೋಚನೆ ಅತ್ಯಂತ ಯೋಗ್ಯವಾಗಿದೆ.

ಆದರೆ, ಅಧಿಕೃತ ಶಾಲೆಗಳ ಪಟ್ಟಿ ಬಿಡುಗಡೆಗೆ ಸರ್ಕಾರ ನೀಡಿದ ಗಡುವು ಮುಗಿದ ಎರಡು ವಾರವಾದರೂ ಬಹುತೇಕ ಬಿಇಒಗಳು ಈ ವಿಚಾರದಲ್ಲಿ ಇಚ್ಛಾಶಕ್ತಿ ಪ್ರದರ್ಶಿಸದೇ ಕಾಲದೂಡಿದ್ದಾರೆ. ಇದರಿಂದ ನಷ್ಟವಾಗುವುದು ಮಕ್ಕಳಿಗೆ ಮತ್ತು ಪಾಲಕರಿಗೆ ಮಾತ್ರ. ಶಾಲೆಗಳ ವಿವರಣಾ ಪುಸ್ತಕದ ಮಾಹಿತಿ ನಂಬಿ ಪಾಲಕರು ತಮ್ಮ ಮಕ್ಕಳನ್ನು ಸೇರಿಸುತ್ತಾರೆ. ಭವಿಷ್ಯದಲ್ಲಿ ಈ ಶಾಲೆಗಳಿಗೆ ಆಪತ್ತು ಎದುರಾದರೆ, ಈ ಮೋಸಕ್ಕೆ ಪಾಲಕರ ಹೊಣೆಯಾಗಬೇಕಾಗುತ್ತದೆ. ಅವರದಲ್ಲದ ತಪ್ಪಿಗೆ ನೋವು ಮತ್ತು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕೂಡಲೇ ರಾಜ್ಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ) ಅಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸುವಂತೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಆಯಾ ಜಿಲ್ಲೆಗಳ ಪ್ರಮುಖ ಪತ್ರಿಕೆಗಳಲ್ಲಿ ಈ ಪಟ್ಟಿ ಪ್ರಕಟವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಪತ್ರದ ಮೂಲಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸುರೇಶ್ ಕುಮಾರ್ ಕೋರಿದ್ದಾರೆ.

ಇದನ್ನೂ ಓದಿ:ರೈತರ ಖಾತೆಗಳಿಗೆ 2-3 ದಿನಗಳೊಳಗಾಗಿ ಬರ ಪರಿಹಾರ ಮೊತ್ತ ಜಮೆ: ಸಚಿವ ಕೃಷ್ಣ ಬೈರೇಗೌಡ - Drought Relief

ABOUT THE AUTHOR

...view details