ಕರ್ನಾಟಕ

karnataka

ETV Bharat / state

ಇಂದಿರಾಗಾಂಧಿ ಅವರ ಆ ಒಂದು ಮಾತು: ಎಸ್.ಎಂ.ಕೃಷ್ಣ ಕಾಂಗ್ರೆಸ್ ಸೇರಿದ್ದೇ ರೋಚಕ - FORMER CM SM KRISHNA

ಮಾಜಿ ಸಿಎಂ ಎಸ್​.ಎಂ ಕೃಷ್ಣ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಅನೇಕ ಏರಳಿತ ಕಂಡ ಅವರ ಜೀವನದಲ್ಲಿ ಕಾಂಗ್ರೆಸ್​ ಪಕ್ಷ ಸೇರಿದ್ದೇ ಒಂದು ರೋಚಕವಾಗಿದೆ.

SM Krishna
ಎಸ್.ಎಂ.ಕೃಷ್ಣ (IANS and ETV Bharat file photo)

By ETV Bharat Karnataka Team

Published : Dec 10, 2024, 1:50 PM IST

Updated : Dec 10, 2024, 2:04 PM IST

ಬೆಂಗಳೂರು: ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್ ಸೇರಿದ್ದು ಕೂಡ ರೋಚಕವಾಗಿದೆ. ಇಂದಿರಾ ಗಾಂಧಿ ಅವರೇ ಎಸ್​.ಎಂ ಕೃಷ್ಣ ಅವರನ್ನು ಕಾಂಗ್ರೆಸ್​ಗೆ ಸೇರ್ಪಡೆಯಾಗುವಂತೆ ಆಹ್ವಾನ ನೀಡಿದ್ದರು.

ಅಂದು ದೆಹಲಿಯಲ್ಲಿ ಪ್ರಧಾನಿ ಇಂದಿರಾಗಾಂಧಿ ನೇತೃತ್ವದಲ್ಲಿ ಸಭೆಯೊಂದು ಏರ್ಪಾಡಾಗಿತ್ತು. ಸಭೆ ಆರಂಭವಾಯಿತು. ಆದರೆ ಸಭೆಯ ಕಾರ್ಯಸೂಚಿಯನ್ನು ಓದಬೇಕಿದ್ದ ಇಂದಿರಾಗಾಂಧಿ ಅವರಿಗೆ ಗಂಟಲು ಕೈ ಕೊಟ್ಟಿತ್ತು. ಹೀಗಾಗಿ ಕಾರ್ಯಸೂಚಿಯನ್ನು ಓದಲಾಗದ ಇಂದಿರಾಗಾಂಧಿ ಮೌನವಾಗಿ ಸಭೆಯ ಸುತ್ತ ಕಣ್ಣಾಡಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಗಣ್ಯ ಅತಿಥಿಗಳು ತಮ್ಮತ್ತಲೇ ನೋಡುತ್ತಿದ್ದರು.

ಸಭೆಯಲ್ಲಿ ಮುಂದೇನು ಮಾಡಬೇಕು ಅಂತ ಇಂದಿರಾಗಾಂಧಿ ಯೋಚಿಸುತ್ತಿದ್ದಂತೆಯೇ ಸಭೆಯ ಕೊನೆಯಲ್ಲಿ ನಿಂತಿದ್ದ ಯುವ ಸಂಸದರೊಬ್ಬರು ಅವರ ಕಣ್ಣಿಗೆ ಕಾಣಿಸಿದ್ದರು. ಆ ಯುವ ಸಂಸದರ ಕತೆಯಾದರೂ ಅಷ್ಟೇ. ಅವರಿಗೆ ಸಭೆಯಲ್ಲಿ ಕೂರಲು ಕುರ್ಚಿ ಸಿಕ್ಕಿರಲಿಲ್ಲ. ಹೀಗಾಗಿ ಕುರ್ಚಿ ಹುಡುಕುತ್ತಿದ್ದ ಅವರಿಗೆ ಒಂದು ಕುರ್ಚಿ ಕಾಣಿಸಿತ್ತು. ಆದರೆ ಖಾಲಿ ಇದ್ದ ಕುರ್ಚಿ ಸ್ವತ: ಪ್ರಧಾನಿ ಇಂದಿರಾಗಾಂಧಿ ಅವರ ಪಕ್ಕದಲ್ಲಿತ್ತು. ಹಾಗಂತಲೇ ಮುಂದೇನು ಮಾಡಬೇಕು ಎನ್ನುವಂತೆ ಅವರು ಇಂದಿರಾ ಗಾಂಧಿ ಕಡೆ ನೋಡಿದ್ದರು. ಆ ಕ್ಷಣದಲ್ಲಿ ಪ್ರಧಾನಿ ಇಂದಿರಾ ಮತ್ತು ಆ ಯುವ ಸಂಸದರ ಕಣ್ಣು ಪರಸ್ಪರ ಸಂಧಿಸಿದವು. ಹೀಗೆ ಪರಸ್ಪರ ಒಬ್ಬರನ್ನೊಬ್ಬರು ನೋಡುತ್ತಿದ್ದಂತೆಯೇ ಒಂದು ವಿಸ್ಮಯ ಸಂಭವಿಸಿತು.

ಇಂದಿರಾಗಾಂಧಿ ಅವರೊಂದಿಗೆ ಎಸ್.ಎಂ.ಕೃಷ್ಣ (ಚಿತ್ರ: ವಾರ್ತಾ ಇಲಾಖೆ)

ಅದು ಏನೆಂದರೆ ಇಂದಿರಾ ಗಾಂಧಿ ತಕ್ಷಣವೇ ಅ ಯುವ ಸಂಸದರನ್ನು ತಮ್ಮ ಬಳಿ ಬರುವಂತೆ ಸೂಚಿಸಿದ್ದರು. ಸ್ವತ: ಪ್ರಧಾನಿಯೇ ತಮ್ಮ ಬಳಿ ಬರುವಂತೆ ಸೂಚಿಸಿದಾಗ ಸಂಸದ ಬೆರಗಾಗಿದ್ದಾರಾದರೂ ಅದೇ ಅಮಯಕ್ಕೆ ಪುಳಕಿತರಾದರು. ಹೀಗಾಗಿ ಅದೇ ಭಾವದಲ್ಲಿ ಇಂದಿರಾ ಹತ್ತಿರ ಹೋದಾಗ ಅವರು ತಮ್ಮ ಪಕ್ಕದ ಕುರ್ಚಿಯಲ್ಲಿ ಕೂರುವಂತೆ ಸೂಚಿಸಿದ್ದರು. ಹೀಗೆ ತಮ್ಮ ಪಕ್ಕ ಕುಳಿತ ಸಂಸದರ ಮುಂದೆ, ತಮ್ಮ ಮುಂದಿದ್ದ ಕಾರ್ಯಸೂಚಿಯನ್ನು ತಳ್ಳಿದ ಇಂದಿರಾ ಅವರು ಸಭೆಯಲ್ಲಿ ಅದನ್ನು ಓದುವಂತೆ, ಸಭೆಯ ನಡಾವಳಿಗಳನ್ನು ನೋಡಿಕೊಳ್ಳಲು ಸೂಚಿಸಿದ್ದರು.

ದೇಶದ ಪ್ರಧಾನಿ ತಮಗೆ ನೀಡಿದ ಈ ಜವಾಬ್ದಾರಿಯನ್ನು ಆ ಸಂಸದರು ಎಷ್ಟು ಚೆನ್ನಾಗಿ ನಿರ್ವಹಿಸಿದ್ದರೆಂದರೆ ಅವರ ಅಸ್ಖಲಿತ ಭಾಷೆ ಇಂದಿರಾಗಾಂಧಿ ಸೇರಿದಂತೆ ಇಡೀ ಸಭೆಯನ್ನು ಮಂತ್ರಮುಗ್ಧಗೊಳಿಸಿತ್ತು. ಸಭೆ ಮುಗಿದ ನಂತರ ಆ ಯುವ ಸಂಸದರನ್ನು ಮೆಚ್ಚುಗೆಯ ಕಣ್ಣುಗಳಿಂದ ನೋಡಿದ ಇಂದಿರಾಗಾಂಧಿ ತಮ್ಮ ಕೈಯಲ್ಲಿದ್ದ ಒಂದು ಚೀಟಿಯನ್ನು ಕೊಟ್ಟಿದ್ದರು.

ನೋಡಿದರೆ ಅದರಲ್ಲಿ 'ಕಮ್ ಅಂಡ್ ಮೀಟ್ ಮೀ' ಅಂತ ಆಹ್ವಾನ ಇತ್ತು. ಹೀಗೆ ತಮ್ಮನ್ನು ಭೇಟಿ ಮಾಡಲು ಖುದ್ದು ಪ್ರಧಾನಿಯೇ ಆಹ್ವಾನ ನೀಡಿದ್ದಾರೆಂದರೆ ಸುಮ್ಮನಿರಲು ಸಾಧ್ಯವೇ?. ಹಾಗಾಗಿ, ಆ ಸಂಸದರು ನಿಗದಿತ ಸಮಯಕ್ಕೆ ಇಂದಿರಾ ಅವರ ಚೇಂಬರಿಗೆ ಹೋಗಿ ಭೇಟಿ ಮಾಡಿದ್ದರು. ಅಷ್ಟೊತ್ತಿಗಾಗಲೇ ಗಂಟಲು ಬೇನೆಯಿಂದ ಸ್ವಲ್ಪ ರಿಲೀಫ್ ಆಗಿದ್ದ ಇಂದಿರಾ ಯುವ ಸಂಸದರ ಪೂರ್ವಾಪರವನ್ನು ವಿಚಾರಿಸಿದ್ದರು.

ಆಗ ಆ ಸಂಸದರು, ಮೇಡಂ, ನನ್ನ ಹೆಸರು ಎಸ್.ಎಂ. ಕೃಷ್ಣ. ಕರ್ನಾಟಕದ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪ್ರಜಾ ಸೋಷಲಿಸ್ಟ್ ಪಾರ್ಟಿಯ ಪ್ರತಿನಿಧಿಯಾಗಿ ಸಂಸತ್ತಿಗೆ ಅಯ್ಕೆಯಾಗಿದ್ದೇನೆ ಅಂತ ವಿವರಿಸಿದ್ದರು. ಆಗೆಲ್ಲ ತುಂಬ ವಿಶ್ವಾಸದಿಂದ ಮಾತನಾಡಿದ ಇಂದಿರಾಗಾಂಧಿ ಅವರು, ನೀವು ಪ್ರಜಾ ಸೋಷಲಿಸ್ಟ್ ಪಾರ್ಟಿಯವರು ಏಕೆ ಹೋರಾಡುತ್ತಿದ್ದೀರೋ? ಅದನ್ನು ಜಾರಿಗೊಳಿಸಲೆಂದೇ ನಮ್ಮ ಪಕ್ಷ, ಸರ್ಕಾರ ಹೋರಾಡುತ್ತಿದೆ. ಹೀಗಾಗಿ ನೀವೆಲ್ಲ ಪ್ರತ್ಯೇಕವಾಗಿರುವ ಬದಲು ಕಾಂಗ್ರೆಸ್ ಪಕ್ಷಕ್ಕೇ ಬನ್ನಿ ಅಂತ ಆಹ್ವಾನ ನೀಡಿದ್ದರು. ಹೀಗೆ ಪ್ರಧಾನಿ ನೀಡಿದ ಆಹ್ವಾನದ ಬಗ್ಗೆ ಪ್ರಜಾ ಸೋಷಲಿಸ್ಟ್ ಪಾರ್ಟಿಯ ಸಭೆಯಲ್ಲಿ ವಿವರಿಸಿದ್ದಾರಾದರೂ ಸಭೆ ಅದನ್ನು ಒಪ್ಪಲಿಲ್ಲ. ಹೀಗಾಗಿ ತಮ್ಮ ಪಕ್ಷದ ನಿಲುವನ್ನು ಕೃಷ್ಣ ಅವರು ಇಂದಿರಾಗೆ ಹೇಳಿದ್ದರು. ಯಾರೂ ಬರದಿದ್ದರೇನು ನೀವಾದರೂ ಬನ್ನಿ. ನೀವು ಬೆಳೆಯುವ ದಾರಿ ದೊಡ್ಡದಿದೆ ಎಂದರಂತೆ.

ಇಂದಿರಾಗಾಂಧಿ ಅವರ ಈ ವಿಶ್ವಾಸಪೂರ್ವಕ ಆಹ್ವಾನವನ್ನು ತಿರಸ್ಕರಿಸಲು ಎಸ್.ಎಂ. ಕೃಷ್ಣ ಅವರಿಗೆ ಸಾಧ್ಯವಾಗಲೇ ಇಲ್ಲ. ಹೀಗಾಗಿ ಒಂದು ದಿನ ಅವರು ಕಾಂಗ್ರೆಸ್ ಹಡಗು ಹತ್ತಿದರು. ಇಂದಿರಾಗಾಂಧಿ ಹೇಳಿದಂತೆ ತಮ್ಮ ಬದುಕಿನಲ್ಲಿ ಬಹುದೊಡ್ಡ ಹಾದಿಯನ್ನು ಕೃಷ್ಣ ಅವರು ಕ್ರಮಿಸಿದರು. ರಾಜ್ಯದ ಚುಕ್ಕಾಣಿ ಹಿಡಿದು ಕರ್ನಾಟಕ ತಿರುಗಿ ನೋಡುವಂತೆ ಮಾಡಿದ ಹೆಗ್ಗಳಿಕೆ ಎಸ್.ಎಂ.ಕೃಷ್ಣ ಅವರದ್ದು.

ಓದಿ:ಎಸ್.ಎಂ.ಕೃಷ್ಣ ಅವರ ಡ್ರೆಸ್ ಸೆನ್ಸ್, ಫ್ಯಾಷನ್ ಪ್ರೀತಿ, ಸ್ಟೈಲ್ ಹೇಗಿತ್ತು ಗೊತ್ತಾ?

Last Updated : Dec 10, 2024, 2:04 PM IST

ABOUT THE AUTHOR

...view details