ಕರ್ನಾಟಕ

karnataka

ETV Bharat / state

ತನ್ನ ತಪ್ಪು ಮುಚ್ಚಿಕೊಳ್ಳಲು ರಾಜ್ಯ ಸರ್ಕಾರದಿಂದ ಪ್ರತಿಭಟನೆಯ ರಾಜಕೀಯ ಸ್ಟಂಟ್: ಬೊಮ್ಮಾಯಿ

ರಾಜ್ಯ ಸರ್ಕಾರ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಕೇಂದ್ರದ ವಿರುದ್ದ ಪ್ರತಿಭಟನೆ ನಡೆಸುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದರು.

Eರಾಜ್ಯ ಸರ್ಕಾರ ತಪ್ಪು ಮುಚ್ಚಿಕೊಳ್ಳಲು ಕೇಂದ್ರದ ವಿರುದ್ದ ಪ್ರತಿಭಟನೆ ರಾಜಕೀಯ ಸ್ಟಂಟ್
ರಾಜ್ಯ ಸರ್ಕಾರ ತಪ್ಪು ಮುಚ್ಚಿಕೊಳ್ಳಲು ಕೇಂದ್ರದ ವಿರುದ್ದ ಪ್ರತಿಭಟನೆ ರಾಜಕೀಯ ಸ್ಟಂಟ್

By ETV Bharat Karnataka Team

Published : Feb 5, 2024, 8:26 PM IST

ಬೆಂಗಳೂರು: ರಾಜ್ಯ ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ಎಂಬ ರಾಜಕೀಯ ಸ್ಟಂಟ್ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹಳೆ ಚಾಳಿ ಬಿಟ್ಟಿಲ್ಲ. ತಮ್ಮ ತಪ್ಪು ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಆರೋಪ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ರೈತ ವಿರೋಧಿ ಸರಕಾರ ರಾಜ್ಯದಲ್ಲಿದೆ. ಒಂಬತ್ತು ತಿಂಗಳಿಂದ ಒಂದು ರೂಪಾಯಿಯೂ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಲ್ಲ ಎಂದರು.

14ನೇ ಹಣಕಾಸಿಗಿಂತ 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಹಣ ಕಡಿಮೆ ಆಗಿದೆ ಅಂತ ಹೇಳಿದ್ದಾರೆ. 15ನೇ ಹಣಕಾಸು ಆಯೋಗದ ಸಮಿತಿ ಬಂದಾಗ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಇತ್ತು. ಆಗ ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಆಯೋಗಕ್ಕೆ ಸರಿಯಾಗಿ ಮಾಹಿತಿ ನೀಡಿಲ್ಲ. ಹೀಗಾಗಿ 15ನೇ ಹಣಕಾಸು ಆಯೋಗದಲ್ಲಿ 4.7%ನಿಂದ 3.6%ಗೆ ಕಡಿಮೆಯಾಗಲು ಸಿದ್ದರಾಮಯ್ಯ ಅವರೇ ನೇರ ಕಾರಣ ಎಂದು ದೂರಿದರು.

ಯುಪಿಎ ಅವಧಿಯಲ್ಲಿ 2004-14ರವರೆಗೆ ತೆರಿಗೆ ಮೂಲಕ 81,795 ಕೋಟಿ ರೂ ಬಂದಿತ್ತು. ಎನ್‌ಡಿಎ ಅವಧಿಯಲ್ಲಿ 2,82,791 ಕೋಟಿ ರೂ. ಬಂದಿದೆ. ಅಭಿವೃದ್ದಿ ಅನುದಾನ ಯುಪಿಎ ಅವಧಿಯಲ್ಲಿ 60,779 ಕೋಟಿ ರೂ.ಬಂದಿದೆ. ಮೋದಿ ಅವಧಿಯಲ್ಲಿ 2,08,882 ಕೋಟಿ ಬಿಡುಗಡೆಯಾಗಿದೆ. ಇದರ ಅವಧಿ ಇನ್ನೂ ಎರಡು ವರ್ಷ ಇದೆ. 2026ರವರೆಗೆ 2.5 ಲಕ್ಷ ಕೋಟಿ ಮೀರಿ ತೆರಿಗೆ ಹಂಚಿಕೆ ಬರಲಿದೆ. ಇದು ಕಾಂಗ್ರೆಸ್ ನೇತೃತ್ವದ ಯುಪಿಎ ಇದ್ದಾಗ 14ನೇ ಹಣಕಾಸಿನ ಶಿಫಾರಸ್ಸಿಗಿಂತ 1,51,309 ಕೋಟಿ ರೂ.ಗಳಿಗಿಂತ ಅಧಿಕವಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಇದಲ್ಲದೇ ಕೇಂದ್ರದಿಂದ ರಾಜ್ಯಕ್ಕೆ ಬೇರೆ ಬೇರೆ ರೂಪದಲ್ಲಿ ಅನುದಾನ ಬರುತ್ತದೆ. ಸ್ವಾತಂತ್ರ್ಯ ಬಂದಾಗಿನಿಂದ 2014ರವರೆಗೆ ರಾಜ್ಯದಲ್ಲಿ ಕೇವಲ 6 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಯಾಗಿತ್ತು. ಆದರೆ, ಮೋದಿ ಅವಧಿಯಲ್ಲಿ 2014-24ರ ವರೆಗೆ 13,500 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಯಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರಾಜ್ಯದ 60 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಿದೆ. ರೈಲ್ವೆ ಯೋಜನೆಗಳಿಗೆ ಯುಪಿಎ ಅವಧಿಯಲ್ಲಿ 835 ಕೋಟಿ ಬಂದಿದ್ದು, ಎನ್​ಡಿಎ ಅವಧಿಯಲ್ಲಿ 11,000 ಕೋಟಿ ರೂ. ಬಂದಿದೆ. 2023-24ನೇ ಬಜೆಟ್​ನಲ್ಲಿ ರಾಜ್ಯ ರೈಲ್ವೆಗೆ 7524 ಕೋಟಿ ರೂ. ಹಂಚಿಕೆಯಾಗಿದೆ. ರೈಲ್ವೆ ವಿದ್ಯುದೀಕರಣಕ್ಕೆ 1947 ರಿಂದ 2014 ರವರೆಗೆ ರಾಜ್ಯದಲ್ಲಿ ಕೇವಲ 16 ಕಿ.ಮೀ ಅಭಿವೃದ್ಧಿ ಆಗಿದ್ದು, ಎನ್​ಡಿಎ ಅವಧಿಯಲ್ಲಿ 3265 ಕಿ.ಮೀ ರಾಜ್ಯದಲ್ಲಿ ರೈಲ್ವೆ ವಿದ್ಯುದೀಕರಣವಾಗಿದೆ. ಕೊರೊನಾ ಸಂದರ್ಭದಲ್ಲಿ ರಾಜ್ಯದಲ್ಲಿ 10 ಕೋಟಿ ಕೊರೊನಾ ಉಚಿತ ಲಸಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ಐದು ಕೆ.ಜಿ ಅಕ್ಕಿಯನ್ನು ಸಂಪೂರ್ಣ ಉಚಿತವಾಗಿ ನೀಡುತ್ತಿದ್ದು, ಅದೆಲ್ಲವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳದೆ ಮರೆಮಾಚುತ್ತಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ:ಕಾಂಗ್ರೆಸ್‌ನವರು ರಾಜ್ಯದಲ್ಲಿ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ದೆಹಲಿಯಲ್ಲಿ ಪ್ರತಿಭಟನೆ ಮಾಡುವ ರಾಜಕೀಯ ಸ್ಟಂಟ್ ಮಾಡುತ್ತಿದ್ದಾರೆ. ಫೆ.7 ರಂದು ಸಿದ್ದರಾಮಯ್ಯ ಅವರ ಸರ್ಕಾರದ ವೈಫಲ್ಯ ವಿರೋಧಿಸಿ ಬಿಜೆಪಿ ವತಿಯಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದರು.

ಹಾವೇರಿ ಲೋಕಸಭಾ ಟಿಕೆಟ್ ವಿಚಾರದ ಕುರಿತು ಮಾಜಿ ಸಿಎಂ ಯಡಿಯೂರಪ್ಪ ಅವರ ಮನೆಯಲ್ಲಿ ಚರ್ಚೆ ನಡೆದಿದೆ ಎನ್ನುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಕುರಿತು ಈಶ್ವರಪ್ಪ ಅವರೊಂದಿಗೆ ಮಾತನಾಡಿದೆ. ಅವರು ಜಗದೀಶ್ ಶೆಟ್ಟರ್ ಜೊತೆ ಯಡಿಯೂರಪ್ಪರನ್ನು ಭೇಟಿ ಮಾಡಿಲ್ಲ ಅಂತ ಹೇಳಿದ್ದಾರೆ. ಟಿಕೆಟ್ ವಿಚಾರದಲ್ಲಿ ಯಡಿಯೂರಪ್ಪರ ಬಳಿ ಯಾರಾದರೂ ಭೇಟಿ ಮಾಡಿ ಚರ್ಚಿಸಬಹುದು ಎಂದು ಹೇಳಿದರು.

ಇದನ್ನೂ ಓದಿ:ಕರ್ನಾಟಕದಲ್ಲಿ ಗ್ರೀನ್ ಹೈಡ್ರೋಜನ್​ ವಿದ್ಯುತ್ ಉತ್ಪಾದನೆಗೆ ಹೊಸ ನೀತಿ ಜಾರಿ: ಇಂಧನ ಸಚಿವ ಕೆ.ಜೆ.ಜಾರ್ಜ್

ABOUT THE AUTHOR

...view details