ಬೆಂಗಳೂರು:ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಬೈಂದೂರು ಬಿಜೆಪಿ ಮಾಜಿ ಶಾಸಕ ಕೆ.ಲಕ್ಷ್ಮೀ ನಾರಾಯಣ(85) ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಮೃತರು ಓರ್ವ ಪುತ್ರ, ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಬೆಂಗಳೂರಿನಲ್ಲಿ ವಾಸವಾಗಿದ್ದರು.
ಲಕ್ಷ್ಮೀ ನಾರಾಯಣ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಬೆಂಗಳೂರಿನ ಡಾಲರ್ ಕಾಲೊನಿಯಲ್ಲಿರುವ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಂಜೆ 4.30ಕ್ಕೆ ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
2008ರಲ್ಲಿ ಮೊದಲ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ವೇಳೆ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಲಕ್ಷ್ಮೀನಾರಾಯಣ ಆಯ್ಕೆಯಾಗಿದ್ದರು.
ವಿಜಯೇಂದ್ರ ಸಂತಾಪ:ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಮುಖಂಡ ಕೆ.ಲಕ್ಷ್ಮೀನಾರಾಯಣ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರ ಸಂತಾಪ ಸೂಚಿಸಿದ್ದಾರೆ.
ಬಿಜೆಪಿ ಶಾಸಕರಾಗಿದ್ದ ಅವರು, ಉದ್ಯಮಿಯೂ ಆಗಿದ್ದರು. ಶಾಸಕರಾಗಿದ್ದಾಗ ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು. ಅಲ್ಲದೆ, ಬೈಂದೂರು ತಾಲೂಕು ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿಶ್ವ ರಾಮಕ್ಷತ್ರಿಯ ಮಹಾಸಂಘದ ಸ್ಥಾಪಕಾಧ್ಯಕ್ಷರಾದ ಅವರು, ಶ್ರೀರಾಮ ವಿವಿಧೋದ್ದೇಶ ಟ್ರಸ್ಟಿನ ಗೌರವಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ವಿವಿಧ ಸಂಘ-ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ಜನಪ್ರಿಯತೆ ಪಡೆದವರು ಎಂದು ತಿಳಿಸಿದ್ದಾರೆ. ಕುಟುಂಬಸ್ಥರು, ಬಂಧುಗಳು, ಹಿತೈಷಿಗಳು ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ವಿಜಯೇಂದ್ರ ಪ್ರಾರ್ಥಿಸಿದ್ದಾರೆ.