ಮೈಸೂರು: ಅರಣ್ಯ ಇಲಾಖೆಯ ಆನ್‌ಲೈನ್ ರಿಸರ್ವೇಶನ್ ನಕಲಿ ಖಾತೆ ತೆರೆದು ಪ್ರವಾಸಿಗರ ಹಣ ದೋಚುತ್ತಿದ್ದ ಗ್ಯಾಂಗ್ ಮತ್ತೆ ತನ್ನ ಹಳೇಯ ಆಟ ಶುರು ಮಾಡಿದೆ. ಈ ಬಗ್ಗೆ ನಕಲಿ ಆನ್‌ಲೈನ್ ರಿಸರ್ವೇಶನ್ ಮಾಡಿಸದಿರಲು ಅರಣ್ಯ ಇಲಾಖೆ ಪ್ರವಾಸಿಗರನ್ನು ಕೋರಿಕೊಂಡಿದೆ. ಇಂತಹ ಪ್ರಕರಣಗಳಿಂದ ಹಣ ಕಳೆದುಕೊಳ್ಳುವ ಬದಲು ಪ್ರವಾಸಿಗರು ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದೆ.
ಹೆಚ್.ಡಿ.ಕೋಟೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಕನಕೋಟೆ ಸಫಾರಿ ನಾಣಚ್ಚಿ ಮತ್ತು ವೀರನಹೊಸಳ್ಳಿ ಸಫಾರಿ ಕೇಂದ್ರದ ಮೂಲಕ ಸಫಾರಿಗೆ ಹೋಗಲು ಆನ್‌ಲೈನ್ ನೋಂದಣಿಗೂ ಮುನ್ನ ಪ್ರವಾಸಿಗರು ನಕಲಿ ನೋಂದಣಿ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಚಿತ್ರ, ಆನೆ, ಹುಲಿ ಮತ್ತು ಇತರ ಪ್ರಾಣಿಗಳ ಚಿತ್ರ ಇರುವ ಖಾಸಗಿ ವೆಬ್ಸೈಟ್ನಲ್ಲಿ ರಿಸರ್ವೇಶನ್ (ಕಾಯ್ದಿರಿಸುವಿಕೆ) ಮಾಡಿಕೊಳ್ಳಲಾಗುತ್ತಿತ್ತು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗೆ ಹೋಗಲು ಬಯಸುವವರು ಆನ್‌ಲೈನ್‌ನಲ್ಲಿ ರಿಸರ್ವೇಷನ್ ಮಾಡುವ ಸಂದರ್ಭದಲ್ಲಿ ಈ ವೆಬ್ಸೈಟ್ ಬರುತ್ತಿತ್ತು. ಹಾಗಾಗಿ ಪ್ರವಾಸಿಗರು ಈ ವೆಬ್ಸೈಟ್ನಲ್ಲಿ ರಿಸರ್ವೇಶನ್ ಮಾಡುತ್ತಿದ್ದರು. ಆಗ ಕೆಲವರಿಗೆ ರಿಸರ್ವೇಶನ್ ಆಗಿದೆ ಎಂಬ ಮಾಹಿತಿ ಬರುತ್ತಿತ್ತು.