ಕರ್ನಾಟಕ

karnataka

ETV Bharat / state

ಬೆಂಗಳೂರು: ವಿದೇಶಿ ಪ್ರಜೆಗಳ ಸಹಿತ ನಾಲ್ವರು ಡ್ರಗ್ ಪೆಡ್ಲರ್‌ಗಳ ಬಂಧನ; 2.35 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ - Drugs

ಬೆಂಗಳೂರಿನಲ್ಲಿ ಘಾನಾ ಮತ್ತು ನೈಜೀರಿಯಾ ಮೂಲದ ನಾಲ್ವರು ವಿದೇಶಿ ಡ್ರಗ್ ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಡ್ರಗ್ ಪೆಡ್ಲರ್‌ಗಳ ಬಂಧನ
ಡ್ರಗ್ ಪೆಡ್ಲರ್‌ಗಳ ಬಂಧನ

By ETV Bharat Karnataka Team

Published : Feb 27, 2024, 3:12 PM IST

ಬೆಂಗಳೂರು : ಡ್ರಗ್ ಪೆಡ್ಲರ್‌ಗಳ ವಿರುದ್ಧ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಸೋಲದೇವನಹಳ್ಳಿ ಮತ್ತು ಆರ್​ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರು ವಿದೇಶಿ ಮೂಲದ ಡ್ರಗ್ ಪೆಡ್ಲರ್‌ಗಳು ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಘಾನಾ ಮೂಲದ ಇಮ್ಯಾನ್ಯುಲ್ ಕ್ವಾಸಿ (32), ನೈಜೀರಿಯಾ ಮೂಲದ ಚೈನಸಾ ಸಿಪ್ರಿಲಾನ್ ಒಕೋಯ್ (38) ಹಾಗೂ ಕಲು ಚುಕ್ವಾ (40) ಎಂಬಾತನ ಸಹಿತ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರಿಂದ ಒಟ್ಟು 2.35 ಕೋಟಿ ಮೌಲ್ಯದ 730 ಗ್ರಾಂ ಎಂಡಿಎಂಎ ಕ್ರಿಸ್ಟಲ್ಸ್, 1273 ಎಕ್ಸ್ಟಸಿ ಪಿಲ್ಸ್, 42 ಗ್ರಾಂ ಹೈಡೋಗಾಂಜಾ ಮತ್ತು ಕೃತ್ಯಕ್ಕೆ ಬಳಸಲಾಗುತ್ತಿದ್ದ 4 ಮೊಬೈಲ್ ಫೋನ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಬಂಧಿತ ಆರೋಪಿಗಳು ಪ್ರವಾಸಿ ವೀಸಾ, ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದು, ಪರಿಚಯಸ್ಥ ಗಿರಾಕಿಗಳಿಗೆ ವಿವಿಧ ರೀತಿಯ ನಿಷೇಧಿತ ಮಾದಕ ವಸ್ತುಗಳನ್ನು ಸರಬರಾಜು ಮಾಡುವ ಮೂಲಕ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದರು. ಈ ಪೈಕಿ ಓರ್ವ ಆರೋಪಿಯು ಈ ಹಿಂದೆ ಮುಂಬೈನಲ್ಲಿ ನೆಲೆಸಿದ್ದು, ಮಾದಕ ಪದಾರ್ಥಗಳ ಮಾರಾಟ ಪ್ರಕರಣದಲ್ಲಿ ಸೆರೆವಾಸ ಸಹ ಅನುಭವಿಸಿದ್ದ ಎಂದು ತಿಳಿದು ಬಂದಿದೆ.

ಆರ್​ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಆರೋಪಿಯು ಸ್ಥಳೀಯನಾಗಿದ್ದು, ಪೋಸ್ಟ್ ಮೂಲಕ ಹೈಡೋಗಾಂಜಾವನ್ನು ತರಿಸಿಕೊಳ್ಳುತ್ತಿದ್ದನು. ಆರೋಪಿಯ ಕುರಿತು ಖಚಿತ ಮಾಹಿತಿಯ ಮೇರೆಗೆ ಆತನನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವಿದೇಶಿ ಮೂಲದವರ ಸಹಿತ 7 ಜನ ಡ್ರಗ್ ಪೆಡ್ಲರ್‌ಗಳ ಸೆರೆ :ಕಳೆದ ತಿಂಗಳು ಜನವರಿ 30 ರಂದು ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಸರಬರಾಜಿನಲ್ಲಿ ತೊಡಗಿದ್ದ ವಿದೇಶಿ ಮೂಲದವರ ಸಹಿತ 7 ಜನ ಆರೋಪಿಗಳನ್ನ ಸಿಸಿಬಿಯ ಮಾದಕ ವಸ್ತು ನಿಗ್ರಹದಳದ ಪೊಲೀಸರು ಬಂಧಿಸಿದ್ದರು. ನಗರದ ಜ್ಞಾನಭಾರತಿ, ಬಾಣಸವಾಡಿ, ಹುಳಿಮಾವು, ಪುಲಿಕೇಶಿನಗರ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಶೇಕ್ ಮೊಹಮ್ಮದ್ ಅರ್ಬಾಜ್, ಗೌತಮ್, ಕೆ. ಅಭಿಷೇಕ್, ಎನ್ ಜಾಧವ್, ರಿತಿಕ್ ರಾಜ್ ಎಂಬಾತನ ಸಹಿತ 7 ಜನ ಆರೋಪಿಗಳನ್ನು ಸೆರೆ ಹಿಡಿದಿದ್ದರು.

ಬಂಧಿತ ಆರೋಪಿಗಳಿಂದ 219 ಎಕ್ಸ್ಟಸಿ ಪಿಲ್ಸ್, 505 ಗ್ರಾಂ ಎಂಡಿಎಂಎ ಕ್ರಿಸ್ಟಲ್ಸ್, 130 ಗ್ರಾಂ ಚರಸ್, 100.88 ಗ್ರಾಂ ಕೊಕೇನ್ ಸಹಿತ 1.52 ಕೋಟಿ ಮೌಲ್ಯದ ಮಾದಕ ಪದಾರ್ಥಗಳು, 1 ದ್ವಿಚಕ್ರ ವಾಹನ, 6 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ಮಾಹಿತಿ ನೀಡಿದ್ದರು.

ಇದನ್ನೂ ಓದಿ :ಪುಣೆಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಡ್ರಗ್ಸ್ ತಯಾರಿಕೆ: 1,100 ಕೋಟಿ ಮೌಲ್ಯದ 600 ಕೆಜಿ ಮಾದಕವಸ್ತು ಜಪ್ತಿ

ABOUT THE AUTHOR

...view details