ಬೆಂಗಳೂರು: ರಸ್ತೆ ಅಪಘಾತದಲ್ಲಿ ರಾಜ್ಯಮಟ್ಟದ ಯುವ ಫುಟ್‌ಬಾಲ್ ಆಟಗಾರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೆ.ಆರ್.ಪುರಂ ಅಂಚಾರಿ ಠಾಣಾ ವ್ಯಾಪ್ತಿಯ ರಾಮಮೂರ್ತಿ ನಗರ ಮೇಲ್ಸೇತುವೆ ಬಳಿ ತಡರಾತ್ರಿ ನಡೆದಿದೆ. ಬಾಬುಸಪಾಳ್ಯ ನಿವಾಸಿ ಮೊನೀಶ್.ಕೆ (27) ಮೃತ ಯುವಕ. ತಡರಾತ್ರಿ 2 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದಿತ್ತು. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಮೊನೀಶ್ನನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಪರಿಕ್ರಮ ಎಫ್.ಸಿ, ಡೆಕ್ಕನ್ ಎಫ್.ಸಿ, ಯಂಗ್ ಚಾಲೆಂಜರ್ಸ್ ಎಫ್.ಸಿ ಸೇರಿದಂತೆ ವಿವಿಧ ಕ್ಲಬ್‌ಗಳ ಪರ ಕಣಕ್ಕಿಳಿದಿದ್ದ ಮೊನೀಶ್, ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಶನ್ (ಎಐಎಫ್ಎಫ್) - ಡಿ ನಿಂದ 2019ರಲ್ಲಿ ಕೋಚಿಂಗ್ ಲೈಸೆನ್ಸ್ ಪಡೆದಿದ್ದರು. ಪ್ರಸ್ತುತ ಬೆಂಗಳೂರು ಡಿಸ್ಟ್ರಿಕ್ಟ್ ಫುಟ್‌ಬಾಲ್ ಅಸೋಸಿಯೇಷನ್ (ಬಿಡಿಎಫ್ಎ) - ಎ ಡಿವಿಷನ್ ಲೀಗ್ ಚಾಂಪಿಯನ್ಶಿಪ್ನಲ್ಲಿ ಬೆಂಗಳೂರು ಈಗಲ್ಸ್ ಎಫ್.ಸಿ ಪರ ಆಡುತ್ತಿದ್ದರು.