ಬೆಂಗಳೂರು:ನಗರದಹೊರ ವರ್ತುಲ ರಸ್ತೆಯಲ್ಲಿ ಮಾ.31ರಂದು ವ್ಯಕ್ತಿಯೊಬ್ಬನ ಮೇಲೆ ಸ್ಟೀಲ್ ಪೈಪ್ನಿಂದ ಇಬ್ಬರು ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆ ದಿನದ ಕೆಲಸಗಳನ್ನು ಅಂದೇ ಮುಗಿಸಿ, ಬಾಕಿ ಇಡಬೇಡಿ ಎಂದು ಸದಾ ಒತ್ತಡ ಹಾಕುತ್ತಿದ್ದ ಅಕೌಂಟೆಂಟ್ ಮೇಲೆ ಹಲ್ಲೆ ನಡೆಸಲು ಸಹೋದ್ಯೋಗಿಗಳೇ ಸುಪಾರಿ ಕೊಟ್ಟಿರುವುದು ಬೆಳಕಿಗೆ ಬಂದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಸುರೇಶ್ ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಷ್ ಕ್ವಾಲೀನ್, ಮುತ್ತು, ವಿನೀಶ್, ಸಂದೀಪ್ ಹಾಗೂ ಉಮಾಶಂಕರ ರೆಡ್ಡಿ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹೆಚ್ಆರ್ ಲೇಔಟ್‌ನಲ್ಲಿರುವ ಹೆರಿಟೇಜ್ ಹಾಲು ಉತ್ಪನ್ನಗಳ ಕಂಪನಿಯಲ್ಲಿ ಹಲ್ಲೆಗೊಳಗಾದ ಸುರೇಶ್ ಅಕೌಂಟೆಂಟ್ ಆಗಿ ಕಳೆದ ಐದು ತಿಂಗಳಿಂದ ಕೆಲಸ ಮಾಡುತ್ತಿದ್ದಾರೆ. ಮೂಲತಃ ಆಂಧ್ರಪ್ರದೇಶದವರಾದ ಇವರು ನಗರದ ಮಾರತ್ ಹಳ್ಳಿಯಲ್ಲಿ ವಾಸವಾಗಿದ್ದರು. ಇದೇ ಕಂಪನಿಯಲ್ಲಿ ಡಿಸ್ಟ್ರಿಬ್ಯೂಟರ್ ಆಗಿ ಆರು ವರ್ಷಗಳಿಂದ ಉಮಾಶಂಕರ ರೆಡ್ಡಿ ಕೆಲಸ ಮಾಡುತ್ತಿದ್ದ. ಈತ ಕೆಲಸದ ವಿಚಾರದಲ್ಲಿ ಕಟ್ಟುನಿಟ್ಟಾಗಿದ್ದ ಸುರೇಶ್ನೊಂದಿಗೆ ಕಿರಿಕ್ ಮಾಡಿಕೊಂಡಿದ್ದ. ಈ ವಿಚಾರವನ್ನು ತನ್ನ ಸಹೋದ್ಯೋಗಿ ವಿನೀಶ್ ಜತೆಗೆ ಚರ್ಚಿಸಿದ್ದ.
ಇಬ್ಬರೂ ಸುರೇಶ್ಗೆ ನಮ್ಮ ತಂಟೆಗೆ ಬರದಂತೆ ಬುದ್ಧಿ ಕಲಿಸಬೇಕೆಂದು ತೀರ್ಮಾನಿಸಿದ್ದರು. ವಿನೀಶ್ ಪರಿಚಯಸ್ಥರೊಂದಿಗೆ ಮಾತನಾಡಿ ಸುರೇಶ್ ಮೇಲೆ ಹಲ್ಲೆ ನಡೆಸಲು ಸುಪಾರಿ ಕೊಟ್ಟಿದ್ದ. ಮಾರ್ಚ್ 31 ರಂದು ಸಂಜೆ 6 ಗಂಟೆ ವೇಳೆ ಕಲ್ಯಾಣನಗರ ಔಟರ್ ರಿಂಗ್ ರೋಡ್ ಬಳಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಸುರೇಶ್ನನ್ನು ಅಡ್ಡಗಟ್ಟಿದ್ದ ಆರೋಪಿಗಳಾದ ಅನುಷ್ ಕ್ವಾಲೀನ್ ಹಾಗೂ ಮುತ್ತು ಅವಾಚ್ಯ ಶಬ್ಧಗಳಿಂದ ನಿಂದಿಸಿ ಸ್ಟೀಲ್ ಪೈಪ್ ನಿಂದ ಹಲ್ಲೆ ಮಾಡಿದ್ದರು. ಹಲ್ಲೆ ದೃಶ್ಯ ಕಾರೊಂದರ ಡ್ಯಾಶ್ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸುರೇಶ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಭಯದಿಂದ ಪೊಲೀಸರಿಗೆ ದೂರು ನೀಡಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಹೆಣ್ಣೂರು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ವಾಣಿಜ್ಯ ಕಟ್ಟಡದಲ್ಲಿ ಅಗ್ನಿ ಅವಘಡ - Fire Accident