ರಾಯಚೂರು: ಅಪಘಾತವಾದಂತೆ ನಟಿಸಿ, ರೈಸ್ ಮಿಲ್ ಮಾಲೀಕನನ್ನು ಅಪಹರಿಸಲು ಯತ್ನಿಸಿದ ಘಟನೆ ರಾಯಚೂರು ಹೊರವಲಯದ ವೈಟಿಪಿಎಸ್ ಘಟಕದ ಎದುರು ಶುಕ್ರವಾರ ಸಂಜೆ ನಡೆದಿದೆ. ಆರೋಪಿಗಳಾದ ರಿಯಾಜ್ ಪಾಷಾ, ಗುರುರಾಜ್, ಶೇಕ್‌ಮುಕ್ತಿಯಾರ್, ಶೇಕ್ ಅಬ್ದುಲ್ ಹಾಗೂ ಗುರುಕುಮಾರ್ ಎಂಬುವರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ:ಶುಕ್ರವಾರ ಸಂಜೆ 7.30ರ ಸುಮಾರಿಗೆ ಎರಡು ಬೈಕ್‌ಗಳಲ್ಲಿ ಬಂದ ಐವರು, ಬೈಕ್ ಅಪಘಾತವಾದಂತೆ ನಟಿಸಿ ಕೆಳಗೆ ಬಿದ್ದಿದ್ದರು. ಕಾರಿನಲ್ಲಿ ಮನೆಗೆ ಹೋಗುತ್ತಿದ್ದ ರೈಸ್ ಮಿಲ್ ಮಾಲೀಕ ನರೇಂದ್ರ ಕುಮಾರ ಅವರು ಕೆಳಗೆ ಬಿದ್ದವರನ್ನು ನೋಡಲು ಹೋಗಿದ್ದರು. ಆಗ ಆರೋಪಿಗಳು, ರೈಸ್ ಮಾಲೀಕರನ್ನು ಹಿಡಿದುಕೊಂಡು ಮಾರಕಾಸ್ತ್ರಗಳನ್ನು ತೋರಿಸಿ ಹೆದರಿಸಿದ್ದಾರೆ. ಆಗ ರೈಸ್ ಮಾಲೀಕರು ತಮ್ಮಲ್ಲಿದ್ದ 50 ಸಾವಿರ ರೂ. ಕೊಟ್ಟು ತಮ್ಮನ್ನು ಬಿಡುವಂತೆ ಕೋರಿದ್ದಾರೆ. ಆರೋಪಿಗಳು ಬಿಡದೆ, ಅವರ ಕಾರಿನಲ್ಲೇ ಅಪಹರಿಸಲು ಯತ್ನಿಸಿದ್ದಾರೆ. ಆದರೆ ರೈಸ್ ಮಿಲ್ ಮಾಲೀಕರು ಕಾರನ್ನು ಲಾಕ್ ಮಾಡಿದ್ದರಿಂದ ಕಾರು ಸ್ಟಾರ್ಟ್ ಆಗಿಲ್ಲ. ಬಳಿಕ ತಮ್ಮ ಬೈಕ್ನಲ್ಲೇ ಕೆಲ ದೂರು ಕರೆದುಕೊಂಡು ಹೋಗಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಬಳಿಕ ಮತ್ತೆ ರೈಸ್ ಮಿಲ್ ಮಾಲೀಕರನ್ನು ಕಾರಿನ ಬಳಿ ಕರೆದುಕೊಂಡು ಬರುತ್ತಾರೆ. ಆಗ ಕಾರಿನ ಬಳಿ ಇದ್ದ ರೈಸ್ ಮಿಲ್ ಸಿಬ್ಬಂದಿಯವರಿಗೂ ಅರೋಪಿಗಳು ಬೆದರಿಕೆ ಹಾಕಿದ್ದಾರೆ. ಈ ವೇಳೆ ಸಿಬ್ಬಂದಿ ಕೂಗಾಡಿದ್ದಾರೆ. ಅಲ್ಲೇ ಗಸ್ತಿನಲ್ಲಿದ್ದ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ, ಓರ್ವನನ್ನು ಬಂಧಿಸಿದ್ದರು. ನಾಲ್ವರು ಪರಾರಿಯಾಗಿದ್ದರು. ಬಳಿಕ ಸೆರೆಸಿಕ್ಕ ಆರೋಪಿಯ ಮಾಹಿತಿ ಆಧರಿಸಿ ಎಲ್ಲರನ್ನೂ ಬಂಧಿಸಿದ್ದೇವೆ ಎಂದು ಎಸ್ಪಿ ಪುಟ್ಟಮಾದಯ್ಯ ಮಾಹಿತಿ ನೀಡಿದ್ದಾರೆ.