ಕರ್ನಾಟಕ

karnataka

ETV Bharat / state

ಸುಗ್ಗಿ ಕಾಲದಲ್ಲಿಯೇ ಕೈಕೊಟ್ಟ ಫಿಶಿಂಗ್​: ಮೀನುಗಾರಿಕೆ ಹಂಗಾಮಿನಲ್ಲಿಯೇ ಲಂಗರು ಹಾಕಿದ ಬೋಟ್​ಗಳು! - Fishing Drought - FISHING DROUGHT

ಸುಗ್ಗಿ ಕಾಲದಲ್ಲಿಯೇ ಮೀನುಗಾರಿಕೆ ಕೈಕೊಟ್ಟಿದೆ. ಕಳೆದ ಎರಡು ವಾರಗಳಿಂದ ನಿರಂತರವಾಗಿ ಮೀನುಗಾರಿಕೆಗೆ ತೆರಳುತ್ತಿರುವ ಬೋಟ್‌ಗಳು ಖಾಲಿ ಬರುವಂತಾಗಿದೆ. ಮೀನುಗಾರಿಕೆ ಹಂಗಾಮಿನಲ್ಲಿಯೇ ಮತ್ಸ್ಯ ಕ್ಷಾಮ ಉಂಟಾಗಿದೆ.

Uttara Kannada  Fishing stopped  Fishing Drought
ಬೋಟ್​ಗಳಿಗೆ ಲಂಗರು ಹಾಕಿರುವುದು (ETV Bharat)

By ETV Bharat Karnataka Team

Published : Aug 18, 2024, 6:28 AM IST

ಸುಗ್ಗಿ ಕಾಲದಲ್ಲಿಯೇ ಕೈಕೊಟ್ಟ ಫಿಶಿಂಗ್​: ಮೀನುಗಾರಿಕೆ ಹಂಗಾಮಿನಲ್ಲಿಯೇ ಲಂಗರು ಹಾಕಿದ ಬೋಟ್​ಗಳು! (ETV Bharat)

ಕಾರವಾರ:ಎರಡು ತಿಂಗಳ ಮೀನುಗಾರಿಕೆ ನಿಷೇಧದ ಬಳಿಕ ಭಾರೀ ನಿರೀಕ್ಷೆಯೊಂದಿಗೆ ಮತ್ಸ್ಯ ಬೇಟೆಗೆ ತೆರಳಿದ ಮೀನುಗಾರರಿಗೆ ಹಂಗಾಮಿನಲ್ಲಿಯೇ ನಿರಾಸೆ ಮೂಡಿದೆ. ಕಳೆದ ಎರಡು ವಾರಗಳಿಂದ ಮೀನುಗಾರಿಕೆಗೆ ತೆರಳುತ್ತಿರುವ ಬೋಟ್‌ಗಳು ಬಹುತೇಕ ಬರಿಗೈಯಲ್ಲಿ ವಾಪಸಾಗುತ್ತಿದ್ದು, ಮತ್ಸ್ಯ ಶಿಕಾರಿಯ ಸುಗ್ಗಿ ಕಾಲದಲ್ಲಿಯೇ ಮತ್ಸ್ಯ ಕ್ಷಾಮ ಕಾಡುವ ಆತಂಕ ಶುರುವಾಗಿದೆ.

ಆಗಸ್ಟ್ 1ರಿಂದ ಮೀನುಗಾರಿಕೆಗೆ ತೆರಳಲು ಅವಕಾಶವಿದ್ದ ಕಾರಣ ತಿಂಗಳಿಂದಲೇ ಸಿದ್ಧತೆಯಲ್ಲಿ ತೊಡಗಿಕೊಂಡದ್ದ ಫಿಶಿಂಗ್ ಬೋಟ್‌ಗಳು ಆಗಸ್ಟ್ ಒಂದರಿಂದಲೇ ಮೀನುಗಾರಿಕೆಗೆ ತೆರಳಲು ನಿರ್ಣಯಿಸಿದ್ದರು. ಅದರಂತೆ ಕಳೆದ ಎರಡು ವಾರಗಳಿಂದ ನಿರಂತರವಾಗಿ ಮೀನುಗಾರಿಕೆಗೆ ತೆರಳುತ್ತಿರುವ ಬೋಟ್‌ಗಳು ಖಾಲಿ ಬರುವಂತಾಗಿದೆ. ಮೀನುಗಾರಿಕೆ ಆರಂಭದಲ್ಲಿ ಸಿಗಡಿ ಮೀನುಗಾರಿಕೆ ನಡೆಸಿ ಒಂದಿಷ್ಟು ಕಾಸು ಸಂಪಾದಿಸುತ್ತಿದ್ದವರಿಗೆ ಇದೀಗ ಖರ್ಚು ಕೈಸೇರದ ಸ್ಥಿತಿ ಇದೆ.

ಸಿಗಡಿಗೆ ಸಿಗದ ಬೆಲೆ; ಈ ಹಿಂದೆ ಮೀನುಗಾರಿಕೆ ಆರಂಭದಲ್ಲಿ ಸಿಗಡಿ ಮೀನುಗಾರಿಕೆ ನಡೆಸಿದಾಗ 5ರಿಂದ 6 ಕ್ವಿಂಟಾಲ್ ಮೀನುಗಾರಿಕೆ ನಡೆಯುತ್ತಿತ್ತು. ಆದರೆ, ಇದೀಗ ತೆರಳಿದ ಬೋಟ್‌ಗಳು 25ರಿಂದ 50 ಕೆಜಿ ಸಿಗಡಿ ತರುತ್ತಿವೆ. ಒಂದೆರಡು ಬೋಟ್‌ಗಳು ಮಾತ್ರ 1ರಿಂದ 2 ಕ್ವಿಂಟಾಲ್ ಸಿಗಡಿ ತಂದಿವೆ. ಆದರೆ, ಹೀಗೆ ತಂದಿರುವ ಸಿಗಡಿಗೆ ಇಲ್ಲಿ ಬೆಲೆಯೂ ಇಲ್ಲದಂತಾಗಿದೆ. ಈ ಹಿಂದೆ ಕೆಜಿಗೆ 130 ರಿಂದ 140 ರೂ. ಇತ್ತು. ಆದರೆ, ಇದೀಗ 80 ರೂಪಾಯಿಗೆ ಖರೀದಿಸಲಾಗುತ್ತಿದೆ. ಇದರಿಂದ ಮೀನುಗಾರರಿಗೆ ಖರ್ಚು ಕೂಡ ಸರಿಹೋಗದ ಸ್ಥಿತಿ ನಿರ್ಮಾಣವಾಗಿದೆ.

ಮೀನುಗಾರಿಕೆಯ ಸುಗ್ಗಿ ಸಮಯದಲ್ಲಿ ಮೀನುಗಾರಿಕೆ ಇಲ್ಲದ ಕಾರಣ ಕಾರವಾರ, ಮುದಗಾ ಸೇರಿದಂತೆ ಕೆಲವು ಕಡೆಗಳಲ್ಲಿ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿದ್ದು, ಬೋಟ್​ಗ​ಳು ಬಂದರು ಪ್ರದೇಶಗಳಲ್ಲಿ ಲಂಗರು ಹಾಕಿವೆ. ಕೆಲವೇ ಕೆಲವು ಮೀನುಗಾರಿಕಾ ಬೋಟ್‌ಗಳು ಹಾಗೂ ಪರ್ಶಿಯನ್ ಬೋಟ್‌ಗಳು ತೆರಳಿವೆ. ಇದೀಗ ಮೀನುಗಾರಿಕೆಗೆ ತೆರಳಿದ ಬೋಟ್‌ಗಳು ಮೀನುಗಾರಿಕೆ ನಡೆಸಿ ವಾಪಸ್ ಬಂದಲ್ಲಿ ಮಾತ್ರ ಲಂಗರು ಹಾಕಿದ ಬೋಟ್‌ಗಳನ್ನು ಮತ್ತೆ ನೀರಿಗೆ ಇಳಿಸುವ ತೀರ್ಮಾನಕ್ಕೆ ಕೆಲ ಬೋಟ್ ಮಾಲೀಕರು ಬಂದಿದ್ದಾರೆ.

ಈ ಸಲ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಜಿಲ್ಲೆಯ ಬಹುತೇಕ ನದಿಗಳು ಉಕ್ಕಿ ಹರಿದಿವೆ. ಇದೇ ಸಮಯಕ್ಕೆ ಮೀನುಗಾರಿಕೆ ಕೂಡ ಆರಂಭಗೊಂಡಿತ್ತು. ಆದರೆ, ಮೀನುಗಾರಿಕೆಗೆ ತೆರಳಿದ ಬಹುತೇಕ ಬೋಟ್‌ಗಳು ವಾಪಸ್​ ಆಗಿವೆ. ಅಲ್ಲದೆ ಮಲ್ಪೆ ಭಾಗದ ಬೋಟ್‌ಗಳು ಕೂಡ ಮೀನಿಲ್ಲದ ಕಾರಣ ಬೈತಖೋಲ್ ಬಂದರು ಬಳಿ ಬಂದು ಲಂಗರು ಹಾಕಿವೆ. ನದಿಗಳಿಂದ ಯಥೇಚ್ಛವಾಗಿ ಹರಿದು ಬಂದ ಸಿಹಿನೀರು ಉಪ್ಪು ನೀರಿನೊಂದಿಗೆ ಸೇರದ ಕಾರಣ ಸಿಗಡಿ ಸೇರಿದಂತೆ ಮೀನುಗಳು ದಡದತ್ತ ಬಂದಿಲ್ಲ. ಇದರಿಂದ ಮೀನುಗಾರರಿಗೂ ಮೀನು ಸಿಗುತ್ತಿಲ್ಲ. ಈ ಹುಣ್ಣಿಮೆ ಬಳಿಕ ಮೀನುಗಾರಿಕೆ ಆಗುವ ನಿರೀಕ್ಷೆ ಮೀನುಗಾರರಲ್ಲಿದೆ. ಸದ್ಯ ಬೈತಖೊಲ್ ಬಂದರಿನಲ್ಲಿ ಮೀನಿಲ್ಲದೆ ಕೆಲ ಬೋಟ್‌ಗಳು ಲಂಗರು ಹಾಕಿದ್ದು, ಇನ್ನೂ ಕೆಲ ಬೋಟ್‌ಗಳು ಇಂದು ಮೀನುಗಾರಿಕೆಗೆ ತೆರಳುತ್ತಿವೆ. ನಾಲ್ಕೈದು ಪರ್ಶಿಯನ್ ಬೋಟ್‌ಗಳು ಕೂಡ ಮೀನುಗಾರಿಕೆಗೆ ತೆರಳಿದ್ದು, ಅವುಗಳು ಬಂದ ಬಳಿಕ ಮೀನುಗಾರಿಕೆ ಹೇಗಿದೆ ಎಂದು ಅಂದಾಜಿಸಿ ಮತ್ತಷ್ಟು ಬೋಟ್​​ಗಳು ತೆರಳಲಿವೆ ಎನ್ನುತ್ತಾರೆ ಸ್ಥಳೀಯರಾದ ರಾಜೇಶ್ ಮಾಜಾಳಿಕರ್.

ಲಾಭಕ್ಕಿಂತ ಖರ್ಚು ಹೆಚ್ಚು:ಮೀನುಗಾರಿಕೆಯ ಸುಗ್ಗಿ ಕಾಲ ಎಂದೇ ಕರೆಯಲಾಗುವ ಆಗಸ್ಟ್​ನಿಂದ 3 ತಿಂಗಳುಗಳ ಕಾಲ ಯಥೇಚ್ಛವಾಗಿ ಮೀನುಗಾರಿಕೆ ನಡೆಸಲಾಗುತ್ತದೆ. ಆದರೆ, ಈ ಬಾರಿ ಎಂದೂ ಎದುರಾಗದ ಸ್ಥಿತಿ ಮೀನುಗಾರಿಕೆಗೆ ಕಾಡಿದೆ. ಮೀನುಗಾರಿಕೆಗೆ ತೆರಳಿದ ಬೋಟ್‌ಗಳು ಹತ್ತಿಪ್ಪತ್ತು ಬುಟ್ಟಿ ಸಿಗಡಿ ಮಾತ್ರ ಹಿಡಿದು ತಂದಿವೆ. ಇದರಿಂದ ಲಾಭಕ್ಕಿಂತ ಖರ್ಚು ಹೆಚ್ಚಾಗಿದೆ. ಇದೀಗ ಡಿಸೇಲ್ ಬೆಲೆ ಹೆಚ್ಚಾಗಿದ್ದು, ಕಾರ್ಮಿಕರ ಸಂಬಳ ಊಟ, ತಿಂಡಿ ಎಲ್ಲವನ್ನು ನೋಡಿಕ್ಕೊಳ್ಳುವುದು ಬೋಟ್ ಮಾಲೀಕರಿಗೆ ಸವಾಲಾಗಿದೆ. ಇದೇ ಕಾರಣಕ್ಕೆ ನಷ್ಟವನ್ನು ತಪ್ಪಿಸಲು ಕೆಲ ಬೋಟ್​ಗಳು ಸದ್ಯ ಲಂಗರು ಹಾಕಲು ಮುಂದಾಗಿವೆ ಎಂದು ಹೇಳುತ್ತಾರೆ ಮೀನುಗಾರ ರಾಜೇಶ್ ಮಾಜಾಳಿಕರ್.

ಇದನ್ನೂ ಓದಿ:ಮುಂಗಾರು ಮಳೆ ಚುರುಕು: ಭಾನುವಾರ ಈ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ - Rain alert

ABOUT THE AUTHOR

...view details