ಬೆಂಗಳೂರು: ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಾಯೋಗಿಕವಾಗಿ ಯುಪಿಐ ಮೂಲಕ ಕಾಯ್ದಿರಿಸದ ರೈಲ್ವೆ ಟಿಕೆಟ್‌ಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ. ಪ್ರಾಯೋಗಿಕವಾಗಿ ರಾಜಧಾನಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಯುಪಿಐ ಮೂಲಕ ಟಿಕೆಟ್ ಖರೀದಿಗೆ ಆವಕಾಶ ನೀಡಲಾಗಿದೆ. ಟಿಕೆಟ್ ಕೌಂಟರ್‌ಗಳಲ್ಲಿ ಇ - ಪಾವತಿಗೆ ಅನುವು ಮಾಡಿಕೊಡಲಾಗಿದೆ.
ಇದಕ್ಕೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಪ್ರಯಾಣಿಕರು ಟಿಕೆಟ್ ಕೌಂಟರ್‌ನಲ್ಲಿ ಹೋಗಬೇಕಾದ ಸ್ಥಳಗಳ ಮಾಹಿತಿ ನೀಡಿದರೆ ಟಿಕೆಟ್ ಇಶ್ಯೂ ಮಾಡಲಾಗುತ್ತಿದೆ. ಸ್ಕ್ರೀನ್‌ನಲ್ಲಿ ಕ್ಯೂ ಆರ್ ಕೋಡ್ ಕಾಣಿಸಿಕೊಂಡಾಗ ಪಾವತಿಸುವ ಮೂಲಕ ಟಿಕೆಟ್ ಪಡೆಯಬಹುದಾಗಿದೆ.
ಕೆಎಸ್‌ಆರ್ ಮಾದರಿಯಲ್ಲೇ ನಗರದ ಯಶವಂಪುರ, ಬೆಂಗಳೂರು ಕಂಟೋನ್ಮೆಂಟ್ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಲಾಗಿದೆ. ಹಿಂದೆ ಕಾಯ್ದಿರಿಸದ ಟಿಕೆಟ್‌ಗಳನ್ನು ನಗದು ರೂಪದಲ್ಲಿ ಮಾತ್ರ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ ಈಗ ಡಿಜಿಟಲ್ ಪಾವತಿಗೂ ಅವಕಾಶ ನೀಡಿರುವುದರಿಂದ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕಾಯ್ದಿರಿಸದ ಟಿಕೆಟ್ ಖರೀದಿಸುವಾಗ ಉಂಟಾಗುವ ಚಿಲ್ಲರೆ ಸಮಸ್ಯೆ, ನಗದು ಸಮಸ್ಯೆಗೆ ಯುಪಿಐ ಪೇಮೆಂಟ್ ವ್ಯವಸ್ಥೆಯು ಪರಿಹಾರವನ್ನು ಒದಗಿಸಲಿದೆ. ಈ ಮೊದಲು ಟಿಕೆಟ್ ಖರೀದಿಗೆ ನಗದು, ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ಗಳ ಮೂಲಕ ಪಾವತಿಗೆ ಅವಕಾಶ ನೀಡಲಾಗಿತ್ತು. ಇವುಗಳಿಂದ ಪಾವತಿ ಸ್ವೀಕಾರಕ್ಕೆ ಇರುವ ಪ್ರಕ್ರಿಯೆಗಳು ವಿಳಂಬವಾಗುತ್ತಿತ್ತು. ಹೊಸ ವ್ಯವಸ್ಥೆ ಪ್ರಯಾಣಿಕರಿಗೆ ಕಾಲ ವಿಳಂಬವಿಲ್ಲದೇ ಟಿಕೆಟ್ ಪಡೆಯಲು ಸಹಕಾರಿಯಾಗುತ್ತಿದೆ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ತ್ರಿನೇತ್ರ ಹೇಳಿದ್ದಾರೆ.
ರೈಲ್ವೆ ಸಚಿವಾಲಯದ ಪ್ರಾಯೋಗಿಕ ಯೋಜನೆ ಇದಾಗಿದ್ದು, ಟಿಕೆಟ್ ಕೌಂಟರ್‌ನಲ್ಲಿ ಈ ಮೊದಲು ಯುಪಿಐ ಪೇಮೆಂಟ್ ವ್ಯವಸ್ಥೆ ಇರಲಿಲ್ಲ. ದೇಶಾದ್ಯಂತ ಈ ವ್ಯವಸ್ಥೆಯನ್ನು ಆರಂಭಿಸುವ ಮೊದಲು ಕೆಲವೇ ಕೆಲವು ರೈಲ್ವೆ ನಿಲ್ಧಾಣಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಯುಪಿಐ ಮೂಲಕ ಈಗಾಗಲೇ ಸಾವಿರಾರು ಜನ ಟಿಕೆಟ್‌ಗಳನ್ನು ಖರೀದಿಸಿದ್ದಾರೆ. ಸಂಪೂರ್ಣ ಬೆಂಗಳೂರಿನಲ್ಲಿ ಈ ವ್ಯವಸ್ಥೆಯನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬೆಂಗಳೂರು: 554 ರೈಲ್ವೆ ನಿಲ್ದಾಣ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಚಾಲನೆ