ಬೆಂಗಳೂರು: "ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯೊಂದಿಗೆ ಚಿಕಿತ್ಸೆ ಉತ್ಕೃಷ್ಟಗೊಂಡಿದೆ. ಭಾರತದಲ್ಲಿ ಮೊದಲ ಬಾರಿಗೆ ನೆಡೆದಿರುವ ಟೈಲೂಪ್‌ಬ್ರೆಸ್ಟ್ ಇಂಪ್ಲಾಂಟ್ ರೀಕನ್‌ಸ್ಟ್ರಕ್ಷನ್‌ನೊಂದಿಗೆ ರೋಬೋಟಿಕ್ ನಿಪ್ಪಲ್ ಸ್ಪೇರಿಂಗ್ ಮಾಸ್ಟೆಕ್ಟಮಿ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ" ಎಂದು ಅಪೋಲೊ ಕ್ಯಾನ್ಸರ್ ಸೆಂಟರ್‌ನ ರೋಬೋಟಿಕ್ ಬ್ರೆಸ್ಟ್ ಸರ್ಜನ್ ಡಾ. ಜಯಂತಿ ತುಮ್ಸಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಟೈಲೂಪ್ ಇಂಪ್ಲಾಂಟ್ ಪುನರ್ನಿರ್ಮಾಣದೊಂದಿಗೆ ರೋಬೋಟಿಕ್ ನಿಪ್ಪಲ್ ಸ್ಪೇರಿಂಗ್ ನಿಖರವಾದ ತಂತ್ರಜ್ಞಾನ ಮತ್ತು ನವೀನ ಪುನರ್ನಿರ್ಮಾಣ ತಂತ್ರಗಳ ಪರಿಪೂರ್ಣ ಮಿಶ್ರಣವಾಗಿ ಹೊರಹೊಮ್ಮಿದೆ. ಈ ಸುಧಾರಿತ ವಿಧಾನ ಪರಿಣಾಮಕಾರಿ ಕ್ಯಾನ್ಸರ್ ಕ್ಲಿಯರೆನ್ಸ್ ಒದಗಿಸುತ್ತದೆ. ಸ್ತನ ಕ್ಯಾನ್ಸರ್ ಚಿಕಿತ್ಸೆಯ ನಂತರ ಜೀವನದ ಗುಣಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ" ಎಂದರು.
ಅಪೋಲೊ ಹಾಸ್ಪಿಟಲ್ಸ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಆಂಕಾಲಜಿ ಮತ್ತು ಇಂಟರ್‌ನ್ಯಾಷನಲ್ ಸಮೂಹದ ಅಧ್ಯಕ್ಷ ದಿನೇಶ್ ಮಾಧವನ್ ಮಾತನಾಡಿ, "ರೋಬೋಟಿಕ್ಸ್ ಕ್ಯಾನ್ಸರ್ ಆರೈಕೆಯಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಇಮೇಜಿಂಗ್ ಮತ್ತು ದೃಶ್ಯೀಕರಣ ತಂತ್ರಜ್ಞಾನಗಳ ಏಕೀಕರಣದೊಂದಿಗೆ ಸುಧಾರಿತ ವಸ್ತುಗಳು ಮತ್ತು ವಿನ್ಯಾಸಗಳು ಶಸ್ತ್ರಚಿಕಿತ್ಸೆಯ ನಿಖರತೆ ಮತ್ತು ವೇಗವನ್ನು ಹೆಚ್ಚಿಸಿದೆ. ಟಿಟಾನೈಸ್ಡ್ ಪಾಲಿಪ್ರೊಪಿಲೀನ್ ಮೆಶ್ ಬಳಕೆಯು ಸೂಕ್ಷ್ಮ ಮತ್ತು ಸಂಕೀರ್ಣ ಅಂಗ ರಚನೆಗಳ ಗುರುತಿಸುವಿಕೆ ಸುಧಾರಿಸಿದೆ. ಟೈಲೂಪ್ ಮತ್ತು ಸ್ತನ ಇಂಪ್ಲಾಂಟ್ ಪುನರ್ನಿರ್ಮಾಣದೊಂದಿಗೆ ರೋಬೋಟಿಕ್ ನಿಪ್ಪಲ್ ಸ್ಪೇರಿಂಗ್ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲು ಸಹಕಾರಿಯಾಗಿದೆ" ಎಂದು ಹೇಳಿದರು.