ಎಸ್ಪಿ ರಾಮ್ ಎಲ್.ಅರಸಿದ್ದಿ ಮಾಹಿತಿ (ETV Bharat) ಕೊಪ್ಪಳ:ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ ಮಹಿಳೆಯನ್ನು ಪತಿಯ ಮನೆಯವರು ವಿಷ ಹಾಕಿ ಕೊಲೆ ಮಾಡಿರುವುದಾಗಿ ಆರೋಪಿಸಿ ಕನಕಗಿರಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಎಫ್‌ಐಆರ್ ದಾಖಲಾಗಿದೆ.
ಕೊಪ್ಪಳದ ಗಂಗಾವತಿ ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಮರಿಯಮ್ಮ ಹನುಮಯ್ಯ ನಾಯಕ ಗಟಾಲಿ (20) ಮೃತಪಟ್ಟ ಮಹಿಳೆ. ಇವರ ತಂದೆ ಗಾಳೆಪ್ಪ ಯಮನಪ್ಪ ಬೇವೂರು ಪೊಲೀಸರಿಗೆ ನೀಡಿದ ದೂರಿನ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಮೃತ ಮಹಿಳೆ ಮತ್ತು ಯುವಕ ಹನುಮಯ್ಯ ಗಟಾಲಿ ಹಲವು ವರ್ಷಗಲಿಂದ ಪರಸ್ಪರ ಪ್ರೀತಿಸುತ್ತಿದ್ದರು. ಒಂದು ವರ್ಷದ ಹಿಂದೆ ವಿವಾಹವಾಗಿದ್ದರು. ಆದರೆ, ವಿವಾಹಕ್ಕೆ ಯುವಕನ ಮನೆಯವರ ವಿರೋಧವಿತ್ತು. ಇದೇ ಕಾರಣಕ್ಕೆ ಆತನ ಕುಟುಂಬದವರು ವಿಷ ಹಾಕಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
"ಮದುವೆಯಾದ ನಂತರ ಮರಿಯಮ್ಮಗೆ ಯುವಕನ ಮನೆಯಲ್ಲಿ ಹಿಂಸೆ ನೀಡುತ್ತಿದ್ದರು. ವರದಕ್ಷಿಣೆ ತರುವಂತೆಯೂ ಪೀಡಿಸುತ್ತಿದ್ದರು. ಯುವಕನ ಕುಟುಂಬದವರು ಆಗಾಗ್ಗೆ ಹಲ್ಲೆಯನ್ನೂ ನಡೆಸುತ್ತಿದ್ದರು. ಹಾಗಾಗಿ ಪ್ರತ್ಯೇಕ ಮನೆ ಮಾಡಿಕೊಂಡು ವಾಸವಾಗಿದ್ದರು. ಆದರೆ ಇದೀಗ ಅನುಮಾನ ಬರಬಾರದೆಂದು ವಿಷವುಣಿಸಿ ಕೊಲೆ ಮಾಡಿದ್ದಾರೆ" ಎಂದು ಮೃತ ಮರಿಯಮ್ಮನ ತಂದೆ ಗಾಳೆಪ್ಪ ಯಮನಪ್ಪ ಬೇವೂರು ಪೊಲೀಸರಿಗೆ ದೂರು ನೀಡಿದ್ದಾರೆ.
"ಪ್ರಕರಣಕ್ಕೆ ಸಂಬಂಧಿಸಿದಂತೆ 13 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ 7 ಮಂದಿಯನ್ನು ಬಂಧಿಸಲಾಗಿದೆ. ಹನುಮಯ್ಯ ಗಟಾಲಿ, ಕಾಳಿಂಗಪ್ಪ ಗಟಾಲಿ, ರಾಮಲಿಂಗಪ್ಪ, ಗಂಗಮ್ಮ, ಮಾರುತಿ, ಅರುಣಾ, ಶರಣಪ್ಪ, ಹಳ್ಳಮ್ಮ, ಈರಮ್ಮ, ಸುಮಾ, ಅನಿತಾ, ಶಿವಕುಮಾರ ಹಾಗೂ ಈರಣ್ಣ ಸೇರಿದಂತೆ ಹದಿಮೂರು ಜನರ ಮೇಲೆ ಕನಕಗಿರಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ" ಎಂದು ಎಸ್ಪಿ ರಾಮ್ ಎಲ್.ಅರಸಿದ್ದಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ರಾಯಚೂರು: ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಯುವಕ - Man Washed Away