ಬೆಂಗಳೂರು:ರಾಜಧಾನಿ ಬೆಂಗಳೂರಿನ ಸಾರ್ವಜನಿಕ ಉದ್ಯಾನವನಗಳ ಸ್ವಚ್ಛತೆ ಕಾಯ್ದುಕೊಳ್ಳುವ ಕುರಿತಂತೆ ಹಲವು ಮಾರ್ಗಸೂಚಿಗಳನ್ನು ರಚಿಸಿರುವ ಹೈಕೋರ್ಟ್, ಉದ್ಯಾನವನಗಳಲ್ಲಿ ನಾಯಿಗಳ ಮಲ ವಿಸರ್ಜನೆಗೆ ಕಾರಣವಾಗುವವರಿಗೆ ಹೆಚ್ಚಿನ ದಂಡ ವಿಧಿಸುವಂತೆ ಸೂಚನೆ ನೀಡಿದೆ.
ನಗರದ ಉದ್ಯಾನವನಗಳಲ್ಲಿ ಸಾಕು ನಾಯಿಗಳಿಂದ ಆಗುತ್ತಿರುವ ಮಲ ವಿಸರ್ಜನೆಗೆ ಕಡಿವಾಣ ಹಾಕುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಕೋರಿ ಮೆಸೆರ್ಸ್ ಕಂಪ್ಯಾಷನ್ ಅನ್ಲಿಮಿಟೆಡ್ ಪ್ಲಸ್ ಆ್ಯಕ್ಷನ್ (ಕೂಪ) ಎಂಬ ಸರ್ಕಾರೇತರ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ ಅವರಿದ್ದ ವಿಭಾಗೀಯ ಪೀಠ, ಹಲವು ಮಾರ್ಗಸೂಚಿಗಳನ್ನು ರಚಿಸಿ, ಅರ್ಜಿ ಇತ್ಯರ್ಥಪಡಿಸಿದೆ.
ವಿಚಾರಣೆ ಸಂದರ್ಭದಲ್ಲಿ ಅರ್ಜಿಯನ್ನು ಹಿಂಪಡೆಯುವುದಾಗಿ ಅರ್ಜಿದಾರರು ತಿಳಿಸಿದ್ದಾರೆ. ಆದರೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಉತ್ತೇಜನ ನೀಡುವ ಸಂದರ್ಭದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಬಾರದು ಎಂದಿರುವ ನ್ಯಾಯಪೀಠ, ವೈಯಕ್ತಿಕ ಹಿತಾಸಕ್ತಿ ಒಳಗೊಳ್ಳುವಿಕೆಯು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪುರಸ್ಕರಿಸಲು ನಿರಾಕರಿಸಲು ಕಾರಣವಾಗಿರುತ್ತದೆ. ಆದರೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅರ್ಜಿದಾರರು ಹಿಂಪಡೆಯಲು ಮುಂದಾದರೂ, ಅಂತಹ ಅರ್ಜಿ ಇತ್ಯರ್ಥಪಡಿಸುವ ಸಂದರ್ಭದಲ್ಲಿ ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಬೇಕಾಗುತ್ತದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿ ನ್ಯಾಯಾಲಯದ ಗಮನಕ್ಕೆ ಬಂದ ಬಳಿಕ ಅದು ನ್ಯಾಯಾಲಯದ ವ್ಯಾಪ್ತಿ ಸೇರಿದ್ದಾಗಿರಲಿದ್ದು, ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಾಗುತ್ತದೆ. ಅರ್ಜಿದಾರರು ಹಿಂಪಡೆಯಲು ಮುಂದಾದ ಸಂದರ್ಭದಲ್ಲಿ ಅದರ ಸಾಧಕ-ಭಾಧಕಗಳನ್ನು ಪರಿಶೀಲಿಸದೆ ಅರ್ಜಿಯನ್ನು ಹಿಂಪಡೆಯಲು ಸುಲಭವಾಗಿ ಅವಕಾಶ ನೀಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರರು, ಸರ್ಕಾರೇತರ ಸಂಸ್ಥೆಯಾಗಿದ್ದು ಸಾರ್ವಜನಿಕ ಉದ್ಯಾನವನಗಳಲ್ಲಿ ಬೇಜವಾಬ್ದಾರಿಯುತವಾಗಿ ಸಾಕು ಪ್ರಾಣಿಗಳ ಪ್ರವೇಶಕ್ಕೆ ಅವಕಾಶ ನೀಡಿರುವುದರಿಂದ ಸ್ವಚ್ಛತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಗರದ ಉದ್ಯಾನವನಗಳ ನಿರ್ವಹಣೆ ಮಾಡುತ್ತಿರುವ ತೋಟಗಾರಿಕೆ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳು ಉದ್ಯಾನಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ವಿಫಲರಾಗಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಅಲ್ಲದೆ, ಬಿಬಿಎಂಪಿ ವ್ಯಾಪ್ತಿಯಲ್ಲಿನ ಉದ್ಯಾನವನಗಳಲ್ಲಿ ಸಾಕಪ್ರಾಣಿಗಳ ವಿಸರ್ಜನೆ ಮಾಡುವ, ಸ್ವಚ್ಛಗೊಳಿಸುವ ಪ್ರಕ್ರಿಯೆಯಲ್ಲಿ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಈ ಸಂಬಂಧ ಸಾರ್ವಜನಿಕರಿಂದ 1,288 ದೂರುಗಳು ದಾಖಲಾಗಿವೆ ಎಂಬುದಾಗಿ ಅರ್ಜಿಯಲ್ಲಿ ವಿವರಿಸಲಾಗಿದೆ.
ಸಾರ್ವಜನಿಕ ಉದ್ಯಾನವನಗಳಿಗೆ ಸಾಕು ನಾಯಿಗಳನ್ನು ಕರೆತರುವ ಪೋಷಕರು ಅದು ವಿಸರ್ಜನೆ ಮಾಡುವ ತ್ಯಾಜ್ಯದ ವಿಲೇವಾರಿಗೆ ಕೈ ಚೀಲಗಳನ್ನು ತೆಗೆದುಕೊಂಡು ಬರಬೇಕು ಎಂಬ ಜಾಗೃತಿ ಮೂಡಿಸಬೇಕಾದ ಅಗತ್ಯವಿದ್ದು, ನಾಯಿಗಳ ವಿಕೃತ ನಡೆಯಿಂದ ಉದ್ಯಾನಕ್ಕೆ ಭೇಟಿ ನೀಡುವವರಿಗೆ ರಕ್ಷಣೆ ನೀಡಬೇಕಾಗಿದೆ. ಅಲ್ಲದೆ, ಸಾರ್ವಜನಿಕ ಉದ್ಯಾನವನಗಳಲ್ಲಿ ಎಲ್ಲ ರೀತಿಯ ಸ್ವಚ್ಛತೆ ಕಾಯ್ದುಕೊಳ್ಳುವುದು ಕಡ್ಡಾಯವಾಗಿರಬೇಕಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಬಿಬಿಎಂಪಿ ಕಾಯಿದೆ 2020ರಲ್ಲಿ ತಿಳಿಸಿರುವಂತೆ ಬಿಬಿಎಂಪಿ ತನ್ನ ವ್ಯಾಪ್ತಿಯಲ್ಲಿ ಉದ್ಯಾನವನಗಳಂತಹ ಸೌಲಭ್ಯವನ್ನು ಒದಗಿಸಬೇಕು ಮತ್ತು ಅವುಗಳನ್ನು ನಿರ್ವಹಣೆ ಮಾಡಬೇಕಾಗುತ್ತದೆ. ಅಲ್ಲದೆ, ಅವುಗಳನ್ನು ನಿಯಂತ್ರಿಸುವುದಕ್ಕೂ ಕಾಯಿದೆಯಲ್ಲಿ ಅವಕಾಶವನ್ನು ನೀಡಲಾಗಿದೆ. ಘನತ್ಯಾಜ್ಯ ನಿರ್ವಹಣೆಗೆ ಕಾಯಿದೆಯಡಿಯಲ್ಲಿ ನಿಯಮಗಳನ್ನು ರೂಪಿಸಲಾಗಿದ್ದರೂ ಮಾನದಂಡಗಳನ್ನು ಅನುಸರಿಲಾಗುತ್ತಿಲ್ಲ. ಜೊತೆಗೆ, ಸಾರ್ವಜನಿಕ ಸ್ಥಳಗಳಲ್ಲಿ ಉಪದ್ರವ ನಿಷೇಧಕ್ಕೆ ಅವಕಾಶವಿದ್ದರೂ ಅವುಗಳನ್ನು ಜಾರಿ ಮಾಡುವು ಇಚ್ಛಾಶಕ್ತಿಯಿಲ್ಲ ಎಂಬುದು ಅರ್ಜಿದಾರರ ಮನವಿಯಾಗಿದೆ.