ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ನಡುವೆ ಗಲಾಟೆ (ETV Bharat) ಕಾರವಾರ (ಉತ್ತರ ಕನ್ನಡ):ಕೈದಿಗಳಿಬ್ಬರು ರಂಪಾಟ ಮಾಡಿ, ತಲೆ ಒಡೆದುಕೊಂಡಿರುವ ಘಟನೆ ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಗುರುವಾರ ನಡೆದಿದೆ. ಜೈಲಿನೊಳಗೆ ಬಹಳಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ, ಸೂಕ್ತ ಸೌಲಭ್ಯವಿಲ್ಲ ಹಾಗೂ ಹೊರಗಿನಿಂದ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗಲು ಬಿಡುತ್ತಿಲ್ಲ. ತಮಗೆ ತಂಬಾಕು ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಅಧಿಕಾರಿಗಳ ಜೊತೆ ರಗಳೆ ತೆಗೆದಿದ್ದಾರೆ ಎನ್ನಲಾಗಿದೆ.
ಜೈಲಿನಲ್ಲಿ ಗಲಾಟೆ ನಡೆದ ಸುದ್ದಿ ತಿಳಿಯುತ್ತಿದ್ದಂತೆ, ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಭದ್ರತೆ ನೀಡಿದ್ದರು. ಅಲ್ಲದೇ ಜೈಲಿನ ಒಳಗೆ ಹೋಗಿ ಕೈದಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದರು. ಗಲಾಟೆ ಮಾಡಿ ಗಾಯಗೊಂಡವರು ದಾಂಡೇಲಿಯ ಮುಜಾಮಿಲ್ ಹಾಗೂ ಕುಮಟಾದ ಫರಾನ್ ಛಬ್ಬಿ ಎನ್ನುವರಾಗಿದ್ದಾರೆ. ಕಲ್ಲಿನಿಂದ ಹೊಡೆದುಕೊಂಡು ಗಾಯ ಮಾಡಿಕೊಂಡಿದ್ದ ಇಬ್ಬರ ತಲೆಗೆ ಬಟ್ಟೆ ಸುತ್ತಿ, ಕಾರವಾರದ ಕ್ರೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೈದಿಗಳನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ, ತಮಗೆ ಜೈಲು ಅಧಿಕಾರಿಗಳು ಮನಬಂದಂತೆ ಥಳಿಸಿದ್ದಾರೆ. ಈ ಗಲಾಟೆಗೆ ಜೈಲು ಅಧಿಕಾರಿಗಳೇ ಕಾರಣ ಎಂದು ಆರೋಪ ಮಾಡುತ್ತ ತೆರಳಿದರು. ಆದರೆ, ಈ ಬಗ್ಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ. ಜಯಕುಮಾರ್ ಕೈದಿಗಳ ಆರೋಪವು ಸುಳ್ಳು ಎಂದು ತಳ್ಳಿಹಾಕಿದ್ದಾರೆ.
ಇದನ್ನೂ ಓದಿ:ಬಳ್ಳಾರಿಗೆ ಸ್ಥಳಾಂತರ ವೇಳೆ ದರ್ಶನ್ ಕೂಲಿಂಗ್ ಗ್ಲಾಸ್ ಧರಿಸಿದ್ದ ವಿಚಾರ: ಕ್ರಮಕ್ಕೆ ಡಿಐಜಿ ಪತ್ರ - DIG Notice on Darshan Cooling glass
''ಕೈದಿಗಳು ಗಲಾಟೆ ಮಾಡಿಕೊಳ್ಳುತ್ತಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಜೈಲಿಗೆ ತೆರಳಿ ಪರಿಶೀಲಿಸಲಾಗಿದೆ. ಜೈಲಿನಲ್ಲಿ ತಪಾಸಣೆ ಬಿಗಿಗೊಳಿಸಿದ್ದರಿಂದ ಮತ್ತು ಸರಿಯಾಗಿ ಊಟ ನೀಡುವಂತೆ ಗಲಾಟೆ ನಡೆಸಿದ್ದರು. ಆರಂಭದಲ್ಲಿ ಗಲಾಟೆ ಬಗ್ಗೆ ಕೇಳಿದಾಗ ಜೈಲಾಧಿಕಾರಿಗಳು ಹಲ್ಲೆ ಮಾಡಿರುವುದಾಗಿ ನಮಗೂ ದೂರಿದ್ದರು. ಬಳಿಕ ಜೈಲಿನಲ್ಲಿ ಪರಿಶೀಲನೆ ನಡೆಸಿ, ಕೈದಿಗಳು ಹಾಗೂ ಜೈಲಿನ ಸಿಬ್ಬಂದಿಯಿಂದ ಮಾಹಿತಿ ಪಡೆದು, ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಇಬ್ಬರೂ ಕಲ್ಲಿನಿಂದ ಮೂರ‍್ನಾಲ್ಕು ಬಾರಿ ಹೊಡೆದುಕೊಂಡಿರುವುದು ಖಚಿತವಾಗಿದೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ'' ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ. ಜಯಕುಮಾರ್ ತಿಳಿಸಿದ್ದಾರೆ.
''ಈ ಬಗ್ಗೆ ಜೈಲಿನ ಸೂಪರಿಟೆಂಡೆಂಟ್ ಅವರಿಂದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾರಾಗೃದಲ್ಲಿ ಮೂವರು ಮಹಿಳೆಯರು ಸೇರಿ ಒಟ್ಟೂ 142 ಮಂದಿ ಕೈದಿಗಳಿದ್ದಾರೆ. ಮೊದಲಿನಿಂದಲೂ ನಾವು ಜೈಲಿನ ಮೇಲೆ ದಾಳಿ ಮಾಡಿ ಪರಿಶೀಲನೆ ಕೈಗೊಳ್ಳುತ್ತಿದ್ದೇವೆ. ಆದರೆ, ಇದೀಗ ಜೈಲಿನಲ್ಲಿ ಬಿಗಿ ಕ್ರಮ ಕೈಗೊಂಡಿದ್ದರಿಂದ ಹಾಗೂ ಊಟ ಸರಿಯಾಗಿ ಕೊಡಬೇಕು ಎಂಬುದು ಸೇರಿ ಹಲವು ಬೇಡಿಕೆಗಳನ್ನು ಇಟ್ಟು ಕೈದಿಗಳು ಗಲಾಟೆ ಮಾಡಿದ್ದಾರೆ. ಈಗ ಪರಿಸ್ಥಿತಿ ಶಾಂತವಾಗಿದೆ'' ಎಂದು ಸಿ.ಟಿ. ಜಯಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಪ್ರಕರಣ; ಪರಪ್ಪನ ಅಗ್ರಹಾರದಿಂದ 14ನೇ ಆರೋಪಿ ಪ್ರದೋಶ್ ಹಿಂಡಲಗಾ ಜೈಲಿಗೆ ಶಿಫ್ಟ್ - Accused Pradosh jail shift