ಮಂಗಳೂರು:ಏಪ್ರಿಲ್ 26ರಂದು ನಡೆಯಲಿರುವ ಮೊದಲ ಹಂತದ ಲೋಕ ಕದನಕ್ಕೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಸಜ್ಜಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಕ್ಷೇತ್ರದ ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಭಾರೀ ಪ್ರಚಾರದಲ್ಲಿ ನಿರತವಾಗಿವೆ. ಜಿಲ್ಲೆಯಲ್ಲಿ ಉಭಯ ಪಕ್ಷಗಳ ನಡುವೆ ಸಮಬಲದ ಹೋರಾಟವೂ ಕಾಣಿಸುತ್ತಿದೆ.
ಒಂದು ಕಾಲದಲ್ಲಿ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಜಿಲ್ಲೆ ಕಳೆದ ಮೂರುವರೆ ದಶಕಗಳಿಂದ ಬಿಜೆಪಿ ಭದ್ರಕೋಟೆ. ಸಂಘಟನಾತ್ಮಕವಾಗಿ ಪ್ರಬಲವಾಗಿ ನೆಲೆಯೂರಿರುವ ಬಿಜೆಪಿ, ಲೋಕಸಭಾ ಚುನಾವಣೆಯಲ್ಲಿ 33 ವರ್ಷಗಳಿಂದ ನಿರಂತರವಾಗಿ ಗೆಲ್ಲುತ್ತಾ ಬಂದಿದೆ. ಜಿಲ್ಲೆಯು ಬಿಜೆಪಿಗೆ ಸುಲಭ ತುತ್ತೆಂಬ ಮಾತಿದೆ. ಆದರೆ, ಈ ಬಾರಿಯ ಚುನಾವಣಾ ಅಖಾಡದಲ್ಲಿ ಕ್ಷೇತ್ರ ಕೇಸರಿ ಪಕ್ಷಕ್ಕೆ ಸುಲಭವಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.
ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಈ ಲೋಕಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸಿದ ಬಳಿಕ ಅಭ್ಯರ್ಥಿಗಳು ಬದಲಾದರೂ ಕ್ಷೇತ್ರದಲ್ಲಿ ಗೆಲುವು ಕಾಣಲಾಗಿರಲಿಲ್ಲ. ವೀರಪ್ಪ ಮೊಯ್ಲಿ, ಮಿಥುನ್ ರೈ ಅಭ್ಯರ್ಥಿಗಳಾಗಿ ಪರಾಭವಗೊಂಡಿದ್ದರು. ಕಾಂಗ್ರೆಸ್ ಪ್ರಬಲ ನಾಯಕರಾಗಿದ್ದರೂ ಕ್ಷೇತ್ರವನ್ನು ಗೆಲ್ಲಲು ಇವರಿಗೆ ಸಾಧ್ಯವಾಗಿರಲಿಲ್ಲ. ಆದರೆ, ಕಳೆದ ವರ್ಷವಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರಿದ್ದ ಪದ್ಮರಾಜ್ ಪೂಜಾರಿಯನ್ನು ಈ ಬಾರಿ ಅಭ್ಯರ್ಥಿ ಮಾಡಿದ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ಮೂಡಿಸಿದೆ. ನಿರೀಕ್ಷೆಯಂತೆ ಬಿಜೆಪಿಯಿಂದ ಹೊಸ ಮುಖ ಕ್ಯಾ.ಬ್ರಜೇಶ್ ಚೌಟ ಕಣಕ್ಕಿಳಿದಿದ್ದಾರೆ. ಎರಡೂ ಪಕ್ಷಗಳಿಂದ ಹೊಸ ಮುಖಗಳು ಕಣದಲ್ಲಿರುವುದರಿಂದ ಕ್ಷೇತ್ರದ ಕುತೂಹಲ ತುಸು ಹೆಚ್ಚಾಗಿಯೇ ಇದೆ. ಇವರಿಬ್ಬರಿಗೂ ಇದು ಮೊದಲ ಚುನಾವಣೆ. ಹಾಗಾಗಿ ಸಹಜವಾಗಿ ಇಬ್ಬರು ಎರಡೂ ಪಕ್ಷಗಳಲ್ಲಿ ಹೊಸ ಆಶಾಭಾವನೆ ಹುಟ್ಟುಹಾಕಿದ್ದಾರೆ.
ಮೂರು ಬಾರಿ ಸಂಸದರಾಗಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಕ್ಷೇತ್ರದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಈ ಬಾರಿ ಬಿಜೆಪಿ ಹೈಕಮಾಂಡ್ ಕ್ಯಾ.ಬ್ರಜೇಶ್ ಚೌಟರಿಗೆ ಟಿಕೆಟ್ ನೀಡಿದೆ. ವಿದ್ಯಾವಂತ, ಯುವಕ, ಪಕ್ಷ ನಿಷ್ಠೆಯ ಹೊಂದಿರುವ ಬ್ರಜೇಶ್ ಚೌಟ ಬಿಜೆಪಿಯಲ್ಲಿನ ಅಸಮಾಧಾನ ತೊಡೆದುಹಾಕಲು ಹೈಕಮಾಂಡ್ ಗುರುತಿಸಿದ ಅಭ್ಯರ್ಥಿ. ಅದೇ ರೀತಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿಗೆ ಟಿಕೆಟ್ ನೀಡಲಾಗಿದೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದ ಪದ್ಮರಾಜ್ಗೆ ಈ ಬಾರಿ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಕ್ಕಿದೆ. ಪದ್ಮರಾಜ್ ಸ್ಪರ್ಧೆಯಿಂದ ಕಾಂಗ್ರೆಸ್‌ನಲ್ಲಿ ಹೊಸ ಉತ್ಸಾಹ ಬಂದಿದೆ.
ಬಿಲ್ಲವ ಫ್ಯಾಕ್ಟರ್: ಕ್ಷೇತ್ರದಲ್ಲಿ ಬಿಲ್ಲವ ಫ್ಯಾಕ್ಟರ್ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲುವಿನ ಹಂತಕ್ಕೆ ತರಲಿದೆ ಎಂಬುದು ಕೈ ಮುಖಂಡರ ವಿಶ್ವಾಸ. ಆದರೆ, ಬಿಜೆಪಿಯೊಂದಿಗೆ ಮೂರು ದಶಕಗಳಿಂದ ಗುರುತಿಸಿಕೊಂಡಿರುವ ಬಿಲ್ಲವರು ಈ ಬಾರಿಯೂ ಪಕ್ಷವನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸ ಬಿಜೆಪಿ ಮುಖಂಡರದು.
ಪದ್ಮರಾಜ್ ಪೂಜಾರಿ ಬಿಲ್ಲವ ಮುಖಂಡ. ಬಿಲ್ಲವ ಕೆಂದ್ರೀತ ಸಮಾಜಚಟುವಟಿಕೆಯಲ್ಲಿ ಮುಂಚೂಣಿಯಲ್ಲಿರುವವರು. ಇವರನ್ನು ಅಭ್ಯರ್ಥಿ ಮಾಡಿದ ಬಳಿಕ ಬಿಲ್ಲವ ಬೆಂಬಲ ವಿಚಾರ ಮುನ್ನೆಲೆಗೆ ಬಂದಿದೆ. ಜನಾರ್ದನ ಪೂಜಾರಿ ಬಳಿಕ ಲೋಕಸಭಾ ಕ್ಷೇತ್ರದಲ್ಲಿ ಬಿಲ್ಲವರು ಗೆದ್ದು ಬರಲಿಲ್ಲ. ಜಿಲ್ಲೆಯಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಬಿಲ್ಲವರಿದ್ದರೂ ಕಳೆದ 33 ವರ್ಷಗಳಲ್ಲಿ ಬಿಜೆಪಿಯಿಂದ ಜೈನ ಸಮುದಾಯದ ಧನಂಜಯಕುಮಾರ್, ಗೌಡ ಸಮುದಾಯದ ಸದಾನಂದಗೌಡ, ಬಂಟ ಸಮುದಾಯದ ನಳಿನ್ ಕುಮಾರ್ ಕಟೀಲ್ ಜಯಗಳಿಸಿದ್ದಾರೆ. ಆದರೆ, ಈ ಬಾರಿ ಬಿಲ್ಲವ ಮುಖಂಡ ಕಾಂಗ್ರೆಸ್ನಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದರಿಂದ ಬಿಲ್ಲವ ಸಮುದಾಯ ಪದ್ಮರಾಜ್ ಗೆಲ್ಲಿಸಲು ಬಿಜೆಪಿಯಿಂದ ಕಾಂಗ್ರೆಸ್ ಕಡೆಗೆ ಶಿಪ್ಟ್ ಆಗಲಿದ್ದಾರೆ ಎಂಬ ಆಶಾ ಭಾವನೆ ಕಾಂಗ್ರೆಸ್ ಪಾಳಯದಲ್ಲಿದೆ. ಇದಕ್ಕೆ ಪೂರಕವಾಗಿ ಜನಾರ್ದನ ಪೂಜಾರಿ ಚುನಾವಣೆಗೆ ಸ್ಪರ್ಧಿಸಿದಾಗಲೂ ಒಟ್ಟಾಗಿರದ ಬಿಲ್ಲವ ಸಮುದಾಯಕ್ಕೆ ಸೇರಿದ ಹೆಚ್ಚಿನ ಸಂಘಟನೆಗಳು ಈ ಬಾರಿ ಒಗ್ಗಟ್ಟಾಗಿ ಪದ್ಮರಾಜ್ ಪರ ಕಾರ್ಯನಿರ್ವಹಿಸುತ್ತಿದೆ.