ನಮ್ಮ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಆಫರ್: ಸಿಎಂ ಸಿದ್ದರಾಮಯ್ಯ ಆರೋಪ ಮೈಸೂರು:''ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿ ಪ್ರಯತ್ನ ಮಾಡುತ್ತಿದೆ. ನಮ್ಮ ಒಬ್ಬೊಬ್ಬ ಶಾಸಕರಿಗೆ 50 ಕೋಟಿ ರೂ. ಆಫರ್ ಕೊಡುತ್ತಿದ್ದಾರೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಬಿಜೆಪಿಯವರು ಯಾವಾಗಲೂ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಎರಡು ಸಲ ಅಧಿಕಾರಕ್ಕೆ ಬಂದಿದ್ದಾರೆ. ಈಗಲೂ ಸರ್ಕಾರವನ್ನು ಬೀಳಿಸಲು ಪ್ರಯತ್ನ ಮಾಡುತ್ತಿದ್ದು, ಕಾಂಗ್ರೆಸ್‌ನ ಪ್ರತಿಯೊಬ್ಬ ಶಾಸಕರಿಗೆ ಬಿಜೆಪಿಯವರು 50 ಕೋಟಿ ರೂಪಾಯಿ ಆಫರ್ ನೀಡುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನ ಯಾವ ಶಾಸಕರೂ ಇದಕ್ಕೆ ಮಣಿದಿಲ್ಲ'' ಎಂದು ಹೇಳಿದ್ದಾರೆ.
''ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ 136 ಸ್ಥಾನಗಳ ಬಲವಿದೆ. ಆದರೂ ಬಿಜೆಪಿಯು ರಾಜ್ಯ ಸರ್ಕಾರವನ್ನು ಉರುಳಿಸಲು ಪ್ರಯತ್ನ ಮಾಡುತ್ತಿದೆ. ಬಿಜೆಪಿ ನಾಯಕರಿಗೆ ಸರ್ಕಾರಗಳನ್ನು ಬೀಳಿಸುವುದು ಒಂದು ಅಭ್ಯಾಸವಾಗಿದೆ. ಇವರು ಯಾವತ್ತೂ ಕೂಡ ನೇರವಾಗಿ ಚುನಾವಣೆ ಎದುರಿಸಿಲ್ಲ. ದೇಶದ ವಿವಿಧ ಕಡೆಗಳಲ್ಲಿ ಸರ್ಕಾರಗಳನ್ನು ಅತಂತ್ರ ಮಾಡಿರುವಂತೆಯೇ, ಕರ್ನಾಟಕ ರಾಜ್ಯದಲ್ಲೂ ಸರ್ಕಾರ ಬೀಳಿಸಿರುವ ಯತ್ನ ನಡೆದಿರುವುದು ನಿಜ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಇತ್ತೀಚೆಗೆ ಶಾಸಕ ರವಿ ಗಣಿಗ ಕೂಡ ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಹಾಗೂ ಸಚಿವ ಸ್ಥಾನ ಕೊಡುವ ಆಮಿಷ ಒಡ್ಡಲಾಗುತ್ತಿದೆ ಎಂದು ಆರೋಪ ಮಾಡಿದ್ದರು.
ಇದನ್ನೂ ಓದಿ:ಮಂಗಳೂರು: ಲೋಕಸಭೆ ಚುನಾವಣೆ ಘೊಷಣೆಗೆ ಮುನ್ನವೇ ಬಿಜೆಪಿಗೆ ಬಂಡಾಯದ ಬಿಸಿ