ಬೆಂಗಳೂರು: ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಮಾಲೀಕರ ಮನೆಯಲ್ಲಿದ್ದ 1 ಕೋಟಿ ಮೌಲ್ಯದ 1.25 ಕೆ.ಜಿ ವಜ್ರ ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ ಆರೋಪದಡಿ ತಂದೆ-ಮಗನನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಡಬಗೆರೆಯ ಕಮಲ ಎಂಬುವರು ನೀಡಿದ ದೂರಿನ ಮೇರೆಗೆ ಬಳ್ಳಾರಿಯ ಕಂಪ್ಲಿ ಮೂಲದ ಮಿರ್ಜಾ ಸೈಯದ್ ಬೇಗ್ (19) ಹಾಗೂ ಈತನ ತಂದೆ ಮಿರ್ಜಾ ದಾದಾ ನೂರುದ್ದಿನ್ ಬೇಗ್ ಎಂಬುವರನ್ನ ಬಂಧಿಸಿ 1.25 ಕೆ.ಜಿ ಚಿನ್ನಾಭರಣ, 2 ಕೆ.ಜಿ. ಬೆಳ್ಳಿ ವಸ್ತುಗಳು, 21.5 ಲಕ್ಷ ನಗದು ಹಾಗೂ ಇನ್ನಿತರ ಪೂಜಾ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಮಲ ಅವರು ಕಡಬಗರೆಯಲ್ಲಿ ಸಂದ್ಯ ಕಿರಣ ಓಲ್ಡ್ ಏಜ್ ಹೋಂ ಮತ್ತು ರಿಹೆಬಿಲೇಷನ್ ಸೆಂಟರ್ ನಡೆಸುತ್ತಿದ್ದಾರೆ. ಅವರು ಆಶ್ರಮದ ನೆಲಮಹಡಿಯಲ್ಲಿ ವಾಸವಾಗಿದ್ದರು. ಕಳೆದ ಮೂರು ವರ್ಷಗಳಿಂದ ಆರೋಪಿ ಮಿರ್ಜಾ ಸೈಯದ್ 15 ದಿನಕ್ಕೊಮ್ಮೆ ಇಲ್ಲಿಗೆ ಬಂದು ಕ್ಲೀನಿಂಗ್ ಕೆಲಸ ಮಾಡಿ ಹೋಗುತ್ತಿದ್ದ. ಅದೇ ರೀತಿ ಏಪ್ರಿಲ್ 9ರಂದು ಕ್ಲೀನಿಂಗ್ ಕೆಲಸ ಮುಗಿಸಿಕೊಂಡು ಹೋಗುವಾಗ ನೆಲಮಹಡಿಯ ಮನೆಯಲ್ಲಿದ್ದ ಕಮಲ ಅವರಿಗೆ ಪ್ರಾಪರ್ಟಿ ಖರೀದಿಸಲು ಮಗ ಹಣ ನೀಡಿದ್ದ. ಇದೇ ಹಣ ಎಣಿಸುತ್ತಿರುವುದನ್ನ ಸೈಯದ್ ಗಮನಿಸಿದ್ದಾನೆ. ಅಲ್ಲದೆ ಚಿನ್ನಾಭರಣ ಇರುವುದನ್ನ ನೋಡಿದ್ದಾನೆ. ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ಕಮಲ ಅವರು ಬನಶಂಕರಿಯಲ್ಲಿರುವ ತಮ್ಮ ಪುತ್ರನ ಮನೆಗೆ ತೆರಳಿದ್ದಳು. ಈ ಬಗ್ಗೆ ಅರಿತು ಕೂಡಲೇ ತಂದೆಗೆ ಕರೆ ಮಾಡಿ ಕಳ್ಳತನ ಮಾಡುವ ಬಗ್ಗೆ ಮಗ ಪ್ರಸ್ತಾಪಿಸಿದ್ದಾನೆ. ಇದಕ್ಕೆ ಒಪ್ಪಿದ ತಂದೆ ಅದೇ ದಿನ ರಾತ್ರಿ ನಗರಕ್ಕೆ ಕರೆಯಿಸಿಕೊಂಡಿದ್ದ. ಪೂರ್ವಸಂಚಿನಂತೆ ಮಾಲೀಕರು ಯಾರೂ ಇಲ್ಲದಿರುವುದನ್ನ ಗಮನಿಸಿ ಮನೆಗೆ ನುಗ್ಗಿ 1 ಕೋಟಿ ಮೌಲ್ಯದ ಚಿನ್ನಾಭರಣ ಎಗರಿಸಿದ್ದಾನೆ. ಸಾಕ್ಷ್ಯಾಧಾರ ನಾಶಪಡಿಸಲು ಮನೆ ತುಂಬಾ ಖಾರದಪುಡಿ ಎರಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.