ಶಿವಮೊಗ್ಗ: ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣದ ವೇಳೆ ನಿರಾಶ್ರಿತರಾದ ನಮಗೆ ಭೂಮಿ ನೀಡಬೇಕು, ಬಗರ್ ಹುಕುಂ ಸಾಗುವಳಿ ಹಕ್ಕುಪತ್ರ ನೀಡಬೇಕು ಎಂಬ ಬೇಡಿಕೆಗಳೊಂದಿಗೆ ಇಂದು ಲಿಂಗನಮಕ್ಕಿ ಜಲಾಶಯ ಮುತ್ತಿಗೆ ಹಾಕಲು ಹೊರಟಿದ್ದ ನೂರಾರು ರೈತರನ್ನು ಪೊಲೀಸರು ಬಂಧಿಸಿದರು.
ರೈತರು ಕಳೆದ ನಾಲ್ಕು ದಿನಗಳಿಂದ ಸಾಗರದ ಎಸಿ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದರು. ನಿನ್ನೆ ಮಧಾಹ್ನ ಸಾಗರದಿಂದ ಹೊರಟಿದ್ದ ರೈತರು ಇಂದು ಕಾರ್ಗಲ್ ಪಟ್ಟಣದ ಚೌಡೇಶ್ವರಿ ದೇವಾಲಯದ ಬಳಿ ಬಂದಾಗ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಎಲ್ಲ ರೈತರನ್ನು ವಶಕ್ಕೆ ಪಡೆದರು.
ಲಿಂಗನಮಕ್ಕಿ ಡ್ಯಾಂ ಮುತ್ತಿಗೆಗೆ ಹೊರಟ ರೈತರ ಬಂಧನ, ಬಿಡುಗಡೆ (ETV Bharat) ಇಂದು ಜೋಗದಿಂದ ಕಾರ್ಗಲ್ ಪಟ್ಟಣಕ್ಕೆ ಸಾಗುವಾಗ ಚೈನಾ ಗೇಟ್ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ರೈತರ ಬಳಿ ಬಂದು ಪಾದಯಾತ್ರೆ ಕೈ ಬಿಡಬೇಕು, ನಾನು ಸಿಎಂ ಜೊತೆ ಮಾತನಾಡುತ್ತೇನೆ. ಸರ್ಕಾರ ಶರಾವತಿ ಸಂತ್ರಸ್ತರ ಪರವಾಗಿದೆ. ಇದಕ್ಕಾಗಿ ಸಭೆ ನಡೆಸಲಾಗಿದೆ. ದೀಪಾವಳಿ ಹಬ್ಬದ ನಂತರ ರೈತ ಮುಖಂಡರನ್ನು ಸಿಎಂ ಬಳಿ ಕರೆದುಕೊಂಡು ಹೋಗುವ ಭರವಸೆ ನೀಡಿದರು. ಆದರೆ ಇದಕ್ಕೆ ರೈತರು ಒಪ್ಪಲಿಲ್ಲ. ಬಳಿಕ ಸಚಿವರು ವಾಪಸ್ ಆಗಿದ್ದಾರೆ. ನಂತರ ಪೊಲೀಸರು ಮೂರು ಬಸ್‌ಗಳಲ್ಲಿ ರೈತರನ್ನು ಬಂಧಿಸಿ ಸಾಗರಕ್ಕೆ ಕರೆದೊಯ್ದರು.
ಈ ಕುರಿತು 'ಈಟಿವಿ ಭಾರತ'ದ ಜೊತೆ ದೂರವಾಣಿಯಲ್ಲಿ ಮಾಹಿತಿ ನೀಡಿದ ರೈತ ಮುಖಂಡ ತೀ.ನಾ.ಶ್ರೀನಿವಾಸ್, ''ನಾವು ಲಿಂಗನಮಕ್ಕಿ ಜಲಾಶಯಕ್ಕೆ ಹೋಗುವ ಮುನ್ನವೇ ನಮ್ಮನ್ನು ಬಂಧಿಸಲಾಗಿದೆ. ನಮ್ಮ ಹೋರಾಟ ಮುಂದುವರೆಯುತ್ತದೆ. ನಾವು ಯಾವುದಕ್ಕೂ ಬೆದರುವುದಿಲ್ಲ. ಸರ್ಕಾರದ ಜೊತೆ ಮಾತನಾಡುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ್ದಾರೆ'' ಎಂದರು.
ಇದನ್ನೂ ಓದಿ:ಬಗರ್ ಹುಕುಂ ಅರ್ಜಿಗಳ ವಿಲೇವಾರಿಗೆ ಆಸಕ್ತಿ ತೋರದಿದ್ದರೆ, ಕಾನೂನು ಕ್ರಮ ಎದುರಿಸಿ : ಸಚಿವ ಕೃಷ್ಣ ಬೈರೇಗೌಡ - Minister Krishna Byre Gowda