ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ ಅಧಿಕ ದರಕ್ಕೆ ಗೊಬ್ಬರ ಮಾರಾಟ ಆರೋಪ: ಕ್ರಮ ಖಚಿತವೆಂದ ಅಧಿಕಾರಿಗಳು - Fertilizer High Price - FERTILIZER HIGH PRICE

ಹಾವೇರಿಯಲ್ಲಿ ಗೊಬ್ಬರ ವಿಚಾರವಾಗಿ ರೈತರು ಹಲವು ಆರೋಪಗಳನ್ನು ಮಾಡಿದ್ದಾರೆ.

Haveri fertilizer price problem
ಹಾವೇರಿ ಗೊಬ್ಬರ ಬೆಲೆ ಸಮಸ್ಯೆ (ETV Bharat)

By ETV Bharat Karnataka Team

Published : Jun 13, 2024, 11:52 AM IST

ಹಾವೇರಿ ಗೊಬ್ಬರ ಬೆಲೆ ಸಮಸ್ಯೆ (ETV Bharat)

ಹಾವೇರಿ: ಜಿಲ್ಲೆಗೆ ಈಗಾಗಲೇ ಮುಂಗಾರು ಪ್ರವೇಶಿಸಿದೆ. ಹಲವು ರೈತರು ಮುಂಗಾರು ಪೂರ್ವ ಮಳೆಯಲ್ಲಿ ಬಿತ್ತನೆ ಮಾಡಿದ್ದಾರೆ. ಬಹಳಷ್ಟು ಮಂದಿ ಮುಂಗಾರು ಜಿಲ್ಲೆಗೆ ಕಾಲಿಟ್ಟ ಮೇಲೆ ಬಿತ್ತನೆ ಮಾಡುತ್ತಿದ್ದಾರೆ. ಆದರೆ, ತಮಗೆ ಸರ್ಕಾರ ನಿಗದಿ ಮಾಡಿದ ದರಕ್ಕೆ ಮತ್ತು ಸೂಕ್ತ ಪ್ರಮಾಣದಲ್ಲಿ ಗೊಬ್ಬರ ಸಿಗುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಅಧಿಕ ದರದಲ್ಲಿ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಅಲ್ಲದೇ ನಾವು ಕೇಳಿದ ಗೊಬ್ಬರಕ್ಕೆ ಬದಲಾಗಿ ವ್ಯಾಪಾರಸ್ಥರು ನೀಡುವ ಲಿಂಕ್ ಗೊಬ್ಬರ ಖರೀದಿಸಬೇಕಾದ ಅನಿವಾರ್ಯತೆ ಜಿಲ್ಲೆಯಲ್ಲಿದೆ. ನಮಗೆ ಯೂರಿಯಾ ಡಿಎಪಿ ಸೇರಿದಂತೆ ವಿವಿಧ ಗೊಬ್ಬರಗಳು ಬೇಕು. ಕೆಲವೊಂದನ್ನು ಬಿತ್ತನೆ ಮಾಡುವ ವೇಳೆ ಬಳಸಿದರೆ, ಮತ್ತೊಂದಿಷ್ಟನ್ನು ಬೆಳೆ ಬೆಳೆದ ಮೇಲೆ ಉಪಯೋಗಿಸಬೇಕಾಗುತ್ತದೆ. ಆದರೆ, ವರ್ತಕರು ಎರಡನ್ನೂ ಒಮ್ಮೆಲೆ ತಗೆದುಕೊಳ್ಳಿ ಎಂದು ಪಟ್ಟು ಹಿಡಿಯುತ್ತಿದ್ದಾರೆ. ಎರಡು ರೀತಿಯ ಗೊಬ್ಬರ ತಗೆದುಕೊಂಡರೆ ಮಾತ್ರ ನಮಗೆ ಬೇಕಾದ ಗೊಬ್ಬರ ಕೊಡುತ್ತಾರೆ. ಇಲ್ಲದಿದ್ದರೆ ನಮ್ಮ ಅಂಗಡಿಯಲ್ಲಿ ಗೊಬ್ಬರ ಇಲ್ಲ ಎನ್ನುತ್ತಾರೆ ಎಂದು ರೈತರು ಆರೋಪಿಸಿದ್ದಾರೆ.

ಸರ್ಕಾರ ಚೀಲಕ್ಕೆ 250 ರೂಪಾಯಿ ದರ ನಿಗದಿ ಮಾಡಿದರೆ, ಅದಕ್ಕೆ 300 ರೂಪಾಯಿ ತೆಗೆದುಕೊಳುತ್ತಾರೆ. ಇದಲ್ಲದೇ ಅಂದು ಬೇಡಿಕೆ ಹೆಚ್ಚಿದ್ದರೆ 400 ರಿಂದ 500 ರೂಪಾಯಿಗೆ ಸಹ ಗೊಬ್ಬರ ಮಾರಾಟ ಮಾಡುತ್ತಾರೆ. ಕಳೆದ ವರ್ಷ ಬರಗಾಲ ಬಂದ ಪರಿಣಾಮ, ಸದ್ಯ ಹಣ ಇಲ್ಲದಂತಾಗಿದೆ. ಈ ವರ್ಷ ಅಲ್ಲಿ ಇಲ್ಲಿ ಸಾಲಸೋಲ ಮಾಡಿ ಗೊಬ್ಬರ ಖರೀದಿ ಮಾಡಲು ಬಂದರೆ ಈ ರೀತಿಯಾಗುತ್ತಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಅಧಿಕಾರಿಗಳನ್ನು ಕೇಳಿದರೆ ಅವರು ಹೇಳುವುದೇ ಬೇರೆ. ಜಿಲ್ಲೆಯಲ್ಲಿ ಸಾಕಷ್ಟು ಬಿತ್ತನೆ ಬೀಜ ಗೊಬ್ಬರ ಸಂಗ್ರಹವಾಗಿದೆ. ಅಲ್ಲದೇ ಸರ್ಕಾರ ನಿಗದಿ ಮಾಡಿದ ದರಕ್ಕೆ ಮಾರಾಟ ಮಾಡಲಾಗುತ್ತದೆ ಎಂದು ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ್ ಅಂಥರವಳ್ಳಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಶೇ.50 ರಿಂದ 55ರಷ್ಟು ಬಿತ್ತನೆ ಆಗಿದೆ. ಇನ್ನೂ ಕೆಲವರು ಬಿತ್ತುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಸರ್ಕಾರ 50 ಕೆ.ಜಿಯ ಡಿಎಪಿಗೆ 1,350 ರೂಪಾಯಿ ನಿಗದಿ ಮಾಡಿದೆ. ಅದೇ ರೀತಿ ಯೂರಿಯಾಗೆ 266 ರೂಪಾಯಿ ನಿಗದಿ ಮಾಡಿದೆ. ಗೊಬ್ಬರ ಮಾರಾಟಗಾರರು ಈ ನಿಗದಿ ಮಾಡಿದ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದರೆ, ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದ್ದಾರೆ.

ಈ ರೀತಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಅಧಿಕ ದರದಲ್ಲಿ ವರ್ತಕರು ಮಾರಾಟ ಮಾಡುವಂತಿಲ್ಲ. ಅದನ್ನು ನಾವು ಯಾವುದೇ ಕಾಲಕ್ಕೂ ಕ್ಷಮಿಸುವುದಿಲ್ಲ. ಅವರ ಮೇಲೆ ನಿರ್ದಾಕ್ಷಣ್ಯ ಕ್ರಮ ತಗೆದುಕೊಳ್ಳುತ್ತೇವೆ. ಜಿಲ್ಲೆಯ ಕೃಷಿ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ರೈತರಿಗೆ ತಿಳಿಸಲಾಗಿದೆ. ಇನ್ನೊಮ್ಮೆ ರೈತ ಸಂಪರ್ಕ ಕೇಂದ್ರಗಳ ಮುಂದೆ ಜಿಲ್ಲೆಯ ಕೃಷಿ ಅಧಿಕಾರಿಗಳ ಫೋನ್​ ನಂಬರ್ ಹಾಕುತ್ತೇವೆ. ರೈತರಿಗೆ ಈ ರೀತಿ ತೊಂದರೆ ಆದರೆ ಈ ನಂಬರ್‌ಗೆ ಕರೆ ಮಾಡಿ ಮಾಹಿತಿ ನೀಡಿದರೆ ಸಾಕು. ಆ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಮಂಜುನಾಥ್ ತಿಳಿಸಿದರು.

ಇದನ್ನೂ ಓದಿ:ವಿಜಯಪುರದಲ್ಲಿ ವರುಣಾರ್ಭಟ: ಕುಸಿದ ಬೃಹತ್ ಬಾವಿ ಗೋಡೆ, ರೈತ ಕಂಗಾಲು - Well Wall Collapsed

ಇಂದು ಎಲ್ಲ ಗೊಬ್ಬರದ ಅಂಗಡಿಗಳಿಗೆ ಭೆಟಿ ನೀಡಿ ದರ ಅಧಿಕ ತಗೆದುಕೊಳ್ಳದಂತೆ ಎಚ್ಚರಿಕೆ ನೀಡುತ್ತೇವೆ. ನಾಳೆಯಿಂದ ಈ ರೀತಿಯಾದರೆ ಅವರ ಮೇಲೆ ಫರ್ಟಿಲೈಜಲ್ ಕಾನೂನಿನಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. ಇನ್ನೂ ಯಾವ ವರ್ತಕರಿಗೂ ನಾವು ಲಿಂಕ್ ಮಾಡಿ ಗೊಬ್ಬರ ನೀಡುವಂತೆ ಒತ್ತಾಯ ಮಾಡಿರುವುದಿಲ್ಲ. ಆದರೆ, ರೈತರು ಯೂರಿಯಾ ಜೊತೆ ಡಿಎಪಿ, ಪೂಟ್ಯಾಶಿಯಂ ಸಲ್ಫೇಟ್ ಇರುವ ಗೊಬ್ಬರ ಹಾಕುವಂತೆ ರೈತರಿಗೆ ತಿಳಿ ಹೇಳಿ ಎಂದು ತಿಳಿಸಿದ್ದೇವೆ. ಇದರಿಂದ ರೈತರ ಬೆಳೆಗಳ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಿರುತ್ತೇವೆ. ಆದರೆ ಅದನ್ನು ತಗೆದುಕೊಳ್ಳುವುದು ಬಿಡುವುದು ರೈತರಿಗೆ ಬಿಟ್ಟ ವಿಚಾರ ಎಂದು ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ್ ಅಂಥರವಳ್ಳಿ ಸ್ಪಷ್ಟನೆ ನೀಡಿದ್ದಾರೆ.

ABOUT THE AUTHOR

...view details