ಬೆಂಗಳೂರು:ಐಟಿ-ಬಿಟಿ ನಗರವಾಗಿರುವ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಹುಸಿ ಬಾಂಬ್ ಕರೆಗಳ ಸಂಖ್ಯೆ ಅಧಿಕವಾಗುತ್ತಿದ್ದು, ಇದು ಪೊಲೀಸರಿಗೆ ತಲೆನೋವಾಗಿ ಪರಿಣಾಮಿಸಿದೆ. ವೈಯಕ್ತಿಕ ತೊಂದರೆ, ಮಾನಸಿಕ ಸಮಸ್ಯೆ ಸೇರಿ ವಿವಿಧ ಕಾರಣಗಳಿಂದಾಗಿ ಕಿಡಿಗೇಡಿಗಳು ಹುಸಿ ಬಾಂಬ್ ಕರೆಗಳ ಸಂಖ್ಯೆಯ ಹೆಚ್ಚಳಕ್ಕೆ ಕಾರಣರಾಗುತ್ತಿದ್ದಾರೆ.
ವಿಮಾನ ನಿಲ್ದಾಣ, ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆ, ರೈಲ್ವೆ ನಿಲ್ದಾಣ ಹಾಗೂ ಪ್ರತಿಷ್ಠಿತ ಹೋಟೆಲ್ಗಳನ್ನು ಗುರಿಯಾಗಿಸಿಕೊಂಡು ಕಿಡಿಗೇಡಿಗಳು ಹುಸಿ ಬಾಂಬ್ ಸಂದೇಶ ಕಳುಹಿಸುತ್ತಿದ್ದಾರೆ. ಹೆಚ್ಚಾಗಿ ಇಮೇಲ್ ಸಂದೇಶ ಹಾಗೂ ಫೋನ್ ಕರೆ ಮಾಡಿ ಬಾಂಬ್ ಇಟ್ಟಿರುವುದಾಗಿ ದುಷ್ಕರ್ಮಿಗಳು ಬೆದರಿಸುತ್ತಿದ್ದಾರೆ. ಹುಸಿ ಬಾಂಬ್ ಎಂದು ಪತ್ತೆ ಹಚ್ಚುವಷ್ಟರಲ್ಲಿ ಪೊಲೀಸರ ಸಮಯ, ಶ್ರಮ ವ್ಯರ್ಥವಾಗುವುದಲ್ಲದೆ, ಕೋಟ್ಯಂತರ ರೂಪಾಯಿ ನಷ್ಟಕ್ಕೂ ಕಿಡಿಗೇಡಿಗಳು ಕಾರಣರಾಗುತ್ತಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ 53 ಬೆದರಿಕೆ ಕರೆಗಳು ಬಂದಿದ್ದು, ಈ ಪೈಕಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಅಧಿಕ ಕರೆಗಳು ಬಂದಿವೆ. 2024ರಲ್ಲಿ 27 ಹಾಗೂ 2023ರಲ್ಲಿ 26 ಕರೆಗಳು ಬಂದಿದ್ದವು. ಬಹುತೇಕ ಪ್ರಕರಣಗಳಲ್ಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದು, ವಿಚಾರಣಾ ಹಂತದಲ್ಲಿವೆ ಎಂದು ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
ಪರ್ಸ್ ಮಿಸ್, ಟ್ರಾಫಿಕ್ ಜಾಮ್ನಿಂದಾಗಿ ಬಾಂಬ್ ಬೆದರಿಕೆ ಕರೆ:ಹುಸಿ ಬಾಂಬ್ ಕರೆ ಅಥವಾ ಸಂದೇಶ ಪ್ರಕರಣಗಳಲ್ಲಿ ಅತ್ಪಲ್ಯ ಸಂಖ್ಯೆಯಲ್ಲಿ ಶಿಕ್ಷೆ ವಿಧಿಸಲಾಗಿದೆ. 2018ರಿಂದ ಈವರೆಗೂ ನಾಲ್ಕು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ಪ್ರಕಟವಾಗಿದೆ. ಉಳಿದ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ವೈಯಕ್ತಿಕ ಹಾಗೂ ಮಾನಸಿಕ ಸಮಸ್ಯೆಗಳಿಂದಾಗಿ ದುಷ್ಕರ್ಮಿಗಳು ವ್ಯವಸ್ಥೆಯನ್ನ ಅಸ್ಥಿರಕ್ಕೆ ಯತ್ನಿಸಿ ಪೊಲೀಸರಿಗೆ ಹಾಗೂ ನಾಗರಿಕರಿಗೆ ಬೆದರಿಕೆವೊಡ್ಡುವ ತಂತ್ರ ಅನುಸರಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಶಿಕ್ಷೆಯಾಗಿದ್ದ ಪ್ರಕರಣಗಳು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವುದು ಗಮನಾರ್ಹ.
2023ರ ಡಿಸೆಂಬರ್ 26ರಂದು ದೆಹಲಿಯಿಂದ ಬೆಂಗಳೂರು ಏರ್ಪೋರ್ಟ್ಗೆ ಬಂದಿದ್ದ ಯುವಕ, ತನ್ನ ಪರ್ಸ್ ಅನ್ನ ವಿಮಾನದಲ್ಲಿ ಬಿಟ್ಟಿದ್ದ. ಇದನ್ನ ಪಡೆಯಲು ಏರ್ಲೈನ್ಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದ. ಸಂಬಂಧಿಸಿದ ವಿಮಾನ ಕಂಪೆನಿಯ ಅಧಿಕಾರಿಗಳನ್ನ ಸಂಪರ್ಕಿಸುವಂತೆ ತಿಳಿಸಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಏರ್ಲೈನ್ಸ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದ. ವಿಮಾನದಲ್ಲಿ ಬಾಂಬ್ ಇಟ್ಟಿರುವುದಾಗಿ ಸುಳ್ಳು ಹೇಳಿದ್ದ. ಎರಡನೇ ಪ್ರಕರಣದಲ್ಲಿ ವಿದ್ಯಾರ್ಥಿ ಮನೆಯಿಂದ ಹೊರಡುವಾಗ ಟ್ರಾಫಿಕ್ ಜಾಮ್ಗೆ ಸಿಲುಕಿ ವಿಮಾನ ಮಿಸ್ಸಾಗಲಿದೆ ಎಂಬ ಕಾರಣಕ್ಕಾಗಿ ಜಾಲತಾಣದ ಮೂಲಕ ವಿಮಾನದಲ್ಲಿ ಬಾಂಬ್ ಇಟ್ಟಿರುವುದಾಗಿ ಸಂದೇಶ ಕಳುಹಿಸಿದ್ದ. ಈ ಸಂಬಂಧ ಬೆಂಗಳೂರು ಏರ್ಪೋರ್ಟ್ ಪೊಲೀಸರು ಬಂಧಿಸಿದ್ದರು.
ಕಳೆದ ಮೂರು ದಿನಗಳ ಹಿಂದೆ ರಾಮೇಶ್ವರಂ ಕೆಫೆ ಮಾದರಿಯಲ್ಲಿ ಗಣರಾಜ್ಯೋತ್ಸವ ದಿನದಂದು ನಗರದ ವಿವಿಧೆಡೆ ಬಾಂಬ್ ಸ್ಫೋಟಿಸಲು ಆರು ಮಂದಿ ಸಂಚು ರೂಪಿಸಿರುವುದಾಗಿ ಅವರ ಹೆಸರು-ವಿಳಾಸವನ್ನ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ತಿಳಿಸಿದ್ದ. ಮಾಹಿತಿ ಆಧರಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದಾಗ ವ್ಯಾಪಾರದಲ್ಲಿ ನಷ್ಟ ಹೊಂದಿದ್ದು, ಪ್ರತಿಸ್ಪರ್ಧಿಗಳ ಹೆಸರನ್ನ ದುರ್ಬಳಕೆ ಮಾಡಿಕೊಂಡಿದ್ದ. ಮಾಹಿತಿಯನ್ನ ಕಡೆಗಣಿಸದೆ ಪೋನ್ ಕರೆ ಬಂದಿರುವ ಲೋಕೆಷನ್ ಆಧರಿಸಿ ಆರೋಪಿಯನ್ನ ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದರು.