ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯೂ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕು ಎನ್ನುವುದು ಸರ್ಕಾರದ ಪಾಲಿಸಿಯ ವಿಷಯವಾಗಿದ್ದರೂ ಆರ್ಥಿಕ ಸ್ಥಿತಿಗತಿಯಾಧರಿತವಾಗಿ ಹಂತ ಹಂತವಾಗಿ ಕ್ರಮ ವಹಿಸಲಾಗುತ್ತದೆ. ಪಿಪಿಪಿ ಮಾದರಿಯಲ್ಲಿಯೂ ಮೆಡಿಕಲ್ ಕಾಲೇಜು ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 2013 ರಲ್ಲಿಯೇ ನಾವು ಪಾಲಿಸಿ ತಂದಿದ್ದೇವೆ, ಪ್ರತಿ ಜಿಲ್ಲೆಯಲ್ಲಿಯೂ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕು ಎನ್ನುವುದು ನಮ್ಮ ಪಾಲಿಸಿ ವಿಷಯವಾಗಿದೆ. ಸದ್ಯ 22 ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಆಗಿದೆ. ಹಣಕಾಸು ಇಲಾಖೆ ಅನುಮತಿ ಸಿಕ್ಕಿದರೆ ಹಂತ ಹಂತವಾಗಿ ಹೊಸ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲಾಗುತ್ತದೆ ಎಂದರು.
ಯಾವ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಇಲ್ಲವೋ ಅಲ್ಲಿ ಪಿಪಿಪಿ ಮಾದರಿಯಲ್ಲಿ ಹೊಸ ಮೆಡಿಕಲ್ ಕಾಲೇಜು ಸ್ಥಾಪಿಸಲು ಕೇಂದ್ರ ಸೂಚಿಸಿದೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ವರದಿ ನೀಡಲು ಐಡೆಕ್ ಸಂಸ್ಥೆಗೆ ಸೂಚಿಸಿದ್ದು, ಈಗಾಗಲೇ ಸರ್ವೆ ಮಾಡಿ ವರದಿ ನೀಡಿದೆ. ಆದರೆ ಆ ವರದಿ ತೃಪ್ತಿ ತರದ ಕಾರಣ ಮತ್ತೊಂದು ವರದಿಗೆ ಸೂಚಿಸಿದ್ದು, ವರದಿ ಬಂದ ನಂತರ ಸಿಎಂ ಜೊತೆ ಚರ್ಚಿಸಿ ಶಿಫಾರಸು ಪರಿಶೀಲಿಸಲಾಗುತ್ತದೆ. ಎಲ್ಲಿ ಸಾಧ್ಯವೋ ಅಲ್ಲಿ ಸರ್ಕಾರದಿಂದ ಮತ್ತು ಅವಕಾಶ ಸಿಗುವ ಕಡೆ ಪಿಪಿಪಿ ಮಾದರಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿಯೂ ಸರ್ಕಾರದಿಂದ ಕಾಲೇಜು ಸ್ಥಾಪನೆ ಸರ್ಕಾರದ ಪಾಲಿಸಿ ವಿಷಯವಾಗಿದೆ ಎಂದು ಹೇಳಿದರು.
ನೀಟ್ ಅಕ್ರಮ ಕುರಿತು ಸದನದಲ್ಲಿ ಗದ್ದಲ, ಅರ್ಧ ಗಂಟೆ ಚರ್ಚೆಗೆ ಅವಕಾಶ:ನೀಟ್ ಪರೀಕ್ಷಾ ಅಕ್ರಮದ ವಿಚಾರ ವಿಧಾನ ಪರಿಷತ್ನಲ್ಲಿ ಪ್ರತಿಧ್ವನಿಸಿತು. ಕೇಂದ್ರದ ಕಡೆ ಬೆರಳು ಮಾಡಿದ ಸರ್ಕಾರದ ನಡೆಗೆ ಆಕ್ಷೇಪಿಸಿದ ಬಿಜೆಪಿ ಸದಸ್ಯರು ಆಡಳಿತ ಪಕ್ಷದ ವಿರುದ್ಧ ಮುಗಿಬಿದ್ದರು. ಈ ವೇಳೆ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು, ಅಂತಿಮವಾಗಿ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವ ಭರವಸೆ ನೀಡಿ ಉಪ ಸಭಾಪತಿ ಪ್ರಾಣೇಶ್ ಗದ್ದಲಕ್ಕೆ ತೆರೆ ಎಳೆದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ನೀಟ್ ಅಕ್ರಮ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಡೀ ದೇಶದಲ್ಲಿ ನೀಟ್ ಪರೀಕ್ಷೆ ಬರೆದು ಕೇಂದ್ರದ ಯಡವಟ್ಟು ಅಕ್ರಮದಿಂದ 24 ಲಕ್ಷ ಮಕ್ಕಳು ಆತಂಕದಲ್ಲಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಕೇಂದ್ರ ಎಡವಿದೆ, ಈ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಗುಮಾನಿಯಾಯಿತು. ಸಿಬಿಐ ತನಿಖೆಗೆ ನಾವು ಆಗ್ರಹಿಸಿದೆವು, ಆದರೆ ಅಕ್ರಮ ಆಗಿಲ್ಲ ಎಂದು ಕೇಂದ್ರ ಸಚಿವರು ಸಮರ್ಥಿಸಿಕೊಂಡರು. ನಂತರ ಸಿಬಿಐಗೆ ವಹಿಸಿದೆ, ಅನೇಕ ರಾಜ್ಯದಲ್ಲಿ ಎಫ್ಐಆರ್ ದಾಖಲಾಗಿದೆ. ಸುಪ್ರೀಂಕೋರ್ಟ್ನಲ್ಲಿ ವಿಷಯ ಇದೆ. ನೀಟ್ ಕೇಂದ್ರದ ಎನ್ಎಂಸಿ ಕಾಯ್ದೆಯ ಪ್ರಕಾರ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ತರಲಾಗಿದೆ. ಸಂಸತ್ ಕಾಯ್ದೆ ತಂದಿದೆ ಹಾಗಾಗಿ ನಾವು ನಮ್ಮ ಹಂತದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್ ಅಥವಾ ಸಂಸತ್ತು ಪರಿಹಾರ ನೀಡಬೇಕು ಎಂದರು.