ಬೆಂಗಳೂರು:ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ ಮಂಡಳಿ ರಚಿಸಲು ಉದ್ದೇಶಿಸಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಟೋ ರಿಕ್ಷಾ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ಲಾರಿ, ಬಸ್ ಇತರೆ ವಾಹನಗಳ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಸಲುವಾಗಿ ಕಾರ್ಮಿಕ ಇಲಾಖೆ ವತಿಯಿಂದ 'ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ ಸುಂಕ ವಿಧೇಯಕ- 2024'ಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಯೋಜನೆ ಅನುಷ್ಠಾನಕ್ಕಾಗಿ ಪ್ರತ್ಯೇಕ ಮಂಡಳಿ ರಚಿಸುವ ಚಿಂತನೆಯನ್ನು ಸಾರಿಗೆ ಇಲಾಖೆ ಮಾಡಿದೆ.
ಖಾಸಗಿ ವಾಣಿಜ್ಯ ಸಾರಿಗೆ ನೌಕರರ ಬೇಡಿಕೆ:ಅಸಂಘಟಿತ ವಲಯದ ಕಾರ್ಮಿಕರ ಹಿತಕಾಯಲು ಜಾರಿಗೆ ತಂದಿರುವ ಈ ಯೋಜನೆಯು ಕರ್ನಾಟಕ ಸರ್ಕಾರದ ಕಾರ್ಮಿಕರ ಬಗೆಗಿನ ಕಾಳಜಿಗೆ ನಿದರ್ಶನವಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಯತ್ನದೊಂದಿಗೆ ಈ ಯೋಜನೆಯು ಜಾರಿಗೆ ಬರಲಿದೆ. ಬಹು ವರ್ಷಗಳಿಂದ ಖಾಸಗಿ ವಾಣಿಜ್ಯ ಸಾರಿಗೆ ನೌಕರರ ಬೇಡಿಕೆ ಇದಾಗಿದ್ದು, ಇತ್ತೀಚಿಗಿನ ಮುಷ್ಕರದ ಸಮಯದಲ್ಲಿಯೂ ಕೂಡ ಈ ಬೇಡಿಕೆಯನ್ನು ಸಂಘಟನೆಗಳು ಸಲ್ಲಿಸಿದ್ದು, ಅವರ ಬೇಡಿಕೆಯನ್ನು ಪರಿಗಣಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಅಸಂಘಟಿತ ಕಾರ್ಮಿಕರಲ್ಲಿ ಪ್ರಮುಖ ವರ್ಗವಾದ ಖಾಸಗಿ ವಾಣಿಜ್ಯ ಸಾರಿಗೆ ವಾಹನಗಳಾದ ಆಟೋ, ಟ್ಯಾಕ್ಸಿ, ಮ್ಯಾಕ್ಸಿಕಾಬ್, ಲಾರಿ ಇತರೆ ವರ್ಗಗಳ ಕಾರ್ಮಿಕರ ಹೆಚ್ಚಿನ ವೃತ್ತಿಯು ದೈಹಿಕ ಶ್ರಮ ಅನಿರಿಕ್ಷಿತ ಅಪಘಾತಕ್ಕೆ ತುತ್ತಾಗುವ ವೃತ್ತಿಯಾಗಿದೆ. ಕುಟುಂಬದಲ್ಲಿ ದುಡಿಯುವ ವ್ಯಕ್ತಿಯು ಅಪಘಾತದಿಂದ ನಿಧನರಾದಲ್ಲಿ ಅಥವಾ ಶಾಶ್ವತ ಅಂಗವೈಕಲ್ಯಕ್ಕೀಡಾದಲ್ಲಿ ಅವರನ್ನು ಅವಲಂಭಿಸಿರುವ ಕುಟುಂಬವು ಆರ್ಥಿಕವಾಗಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಮೋಟಾರು ಸಾರಿಗೆ ವಾಹನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬುಕ್ಕಿಂಗ್ ಕ್ಲರ್ಕ್, ನಗದು ಕರ್ಕ್ಗಳು ಮೋಟಾರು ಗ್ಯಾರೇಜುಗಳಲ್ಲಿ ತೊಡಗಿರುವ ಮೆಕಾನಿಕ್, ಟೈಯರ್ ರಿಟ್ರೇಡಿಂಗ್, ಪಂಕ್ಚರ್ ಶಾಪ್ಗಳಲ್ಲಿ ಕೆಲಸ ಮಾಡುವರು ಹಾಗೂ ಆಟೋ ಮೊಬೈಲ್ ಬಾಡಿ ಬಿಲ್ಡಿಂಗ್ನಲ್ಲಿ ಕಾರ್ಯ ನಿರ್ವಹಿಸುವವರಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.