ಬೆಳಗಾವಿ:ಈಗಂತೂಎಲ್ಲೆಡೆ ಕುಡಿಯುವ ನೀರಿಗಾಗಿ ಹಾಹಾಕಾರವಿದೆ. ಇದಕ್ಕೆ ಕಾರಣ ಬರಗಾಲ. ಆದರೆ, ಈ ನಾಲ್ಕು ಊರುಗಳಲ್ಲಿ ಮಾತ್ರ ಕೆರೆ, ಬಾವಿಗಳಲ್ಲಿ ನೀರು ತುಂಬಿ ತುಳುಕುತ್ತಿದ್ದು ಜನತೆ ಹರ್ಷಗೊಂಡಿದ್ದಾರೆ. ಇದಕ್ಕೆಲ್ಲ ಕಾರಣ ಓರ್ವ ಜಲ ಮನುಷ್ಯ!.
ಕೆರೆ ನೀರಲ್ಲಿ ಜಾನುವಾರು, ಮೈ ತೊಳೆಯುತ್ತಿರುವ ಜನ. ಬಿಸಿಲ ತಾಪಕ್ಕೆ ಕೆರೆಯಲ್ಲಿ ಈಜಿ ತಂಪಾಗುತ್ತಿರುವ ಎಮ್ಮೆ. ಈ ದೃಶ್ಯಗಳು ಕಂಡುಬಂದಿದ್ದು ಬೆಳಗಾವಿ ತಾಲೂಕಿನ ಬಂಬರಗಾ ಗ್ರಾಮದ ಕೆರೆಯಲ್ಲಿ. ಇದೊಂದೇ ಅಲ್ಲ. ಇಲ್ಲಿನ ಕಟ್ಟಣಭಾವಿ, ನಿಂಗ್ಯಾನಟ್ಟಿ, ಗುರಾಮಟ್ಟಿ ಗ್ರಾಮಗಳ ಕೆರೆ, ಬಾವಿಗಳೂ ಮೈದುಂಬಿವೆ. ಇಂಥ ಭೀಕರ ಬರಗಾಲದಲ್ಲೂ ಇಷ್ಟೊಂದು ನೀರು ಮತ್ತು ಇಲ್ಲಿನ ಪರಿಸರ ಹಚ್ಚ ಹಸಿರಾಗಿ ಕಂಗೊಳಿಸಲು ಕಾರಣ ಪರಿಸರವಾದಿ ಶಿವಾಜಿ ಕಾಗಣಿಕರ್ ಕೈಗೊಂಡ ನಿರ್ಧಾರ.
ಶಿವಾಜಿ ಛತ್ರಪ್ಪ ಕಾಗಣಿಕರ್ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದವರು. 1972ರಲ್ಲಿ ಮನೆ ಬಿಟ್ಟ ಇವರು ಒಬ್ಬ ಅಪ್ಪಟ ಗಾಂಧಿವಾದಿ, ಪರಿಸರವಾದಿ, ಶಿಕ್ಷಕ ಹಾಗೂ ಹೋರಾಟಗಾರ. ಇವರ ಜಲ ಕ್ರಾಂತಿಯಿಂದ ಹಲವು ಗ್ರಾಮಗಳು ಹಚ್ಚ ಹಸಿರಾಗಿವೆ. 75 ವರ್ಷದ ಶಿವಾಜಿ ಕಾಗಣಿಕರ್ ಒಂದು ಊರಿನಿಂದ ಮತ್ತೊಂದು ಊರಿಗೆ, ಆ ಹೊಲದಿಂದ ಮತ್ತೊಂದು ಹೊಲಕ್ಕೆ ಸಂಚರಿಸುತ್ತ ತಾವು ನೆಟ್ಟ ಗಿಡಗಳನ್ನು ವೀಕ್ಷಿಸುತ್ತಾರೆ.
1984ರಲ್ಲಿ ಮೊದಲ ಬಾರಿ ಹಂದಿಗನೂರ ಪ್ರೌಢಶಾಲೆ ಆವರಣದಲ್ಲಿ ಗಿಡ ನೆಡುವ ಮೂಲಕ ಆರಂಭವಾದ ಇವರ ಪರಿಸರ ಕಾಯಕ ನಂತರ ಎಲ್ಲ ಕಡೆ ಮುಂದುವರೆಯಿತು. ಇದೇ ವೇಳೆ ಅರಣ್ಯ ಇಲಾಖೆಯಿಂದ 5 ಸಾವಿರ ಸಸಿ ತರಿಸಿ ವಿದ್ಯಾರ್ಥಿಗಳಿಗೆ ವಿತರಿಸಿದ್ದರು. ಹೀಗೆ ಸುತ್ತಲಿನ ಶಾಲೆಗಳ ವಿದ್ಯಾರ್ಥಿಗಳಿಗೂ ಸಸಿಗಳನ್ನು ವಿತರಿಸಿ ಜಾಗೃತಿ ಮೂಡಿಸಿದ್ದರು.
ಈ ಮೊದಲು ಇಲ್ಲಿನ ಜನ ಜಲ ಸಂಕಷ್ಟ ಅನುಭವಿಸುತ್ತಿದ್ದರು. ಇದಕ್ಕೆ ಕಡಿವಾಣ ಹಾಕಲು ಶಿವಾಜಿ ಮುಂದಾದರು. ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಮ್ಮ ಹುಟ್ಟೂರು ಮಹಾರಾಷ್ಟ್ರದ ರಾಳೇಗಾಂವ ಸಿದ್ಧಿಯಲ್ಲಿ ಕೈಗೊಂಡ ಜಲಕ್ರಾಂತಿಯನ್ನು ಕಣ್ಣಾರೆ ಕಂಡಿರುವ ಶಿವಾಜಿ, ಇಲ್ಲಿಯೂ ಅದನ್ನು ಸಾಕಾರಗೊಳಿಸಿದ್ದಾರೆ. ಜಲಾನಯನ ಪ್ರದೇಶಾಭಿವೃದ್ಧಿ ಯೋಜನೆಯಡಿ ಜರ್ಮನ್ ದೇಶದ ರೂಡಾಲ್ಫ್ ಅವರು ನೀಡಿದ ಒಟ್ಟು 30 ಲಕ್ಷ ರೂ. ಅನುದಾನದಲ್ಲಿ ಜನಜಾಗರಣ ಸಂಸ್ಥೆ ಮತ್ತು ಗ್ರೀನ್ ಸೇವಿಯರ್ಸ್ ಮೂಲಕ ಗ್ರಾಮಸ್ಥರ ಸಹಕಾರದೊಂದಿಗೆ ಮರ ಬೆಳೆಸುವ ಜತೆಗೆ ಕಟ್ಟಣಬಾವಿಯಲ್ಲಿ 2, ನಿಂಗ್ಯಾನಟ್ಟಿ 3, ಇದ್ದಿಲಹೊಂಡ ಹಾಗೂ ಗುರಾಮಟ್ಟಿ ಗ್ರಾಮದಲ್ಲಿ ತಲಾ ಒಂದು ಕೆರೆ ನಿರ್ಮಿಸಿದ್ದಾರೆ.
ಕೆರೆ, ಬಾವಿ, ಹಳ್ಳಗಳ ಪುನಶ್ಚೇತನ ಮಾಡಿದ್ದಾರೆ. ಕಾಲುವೆಯಿಂದ ಹಳ್ಳಕ್ಕೆ ನೀರು ಹೋಗುವಂತೆ, ಹಳ್ಳದಿಂದ ನದಿಗೆ ನೀರು ಹೋಗುವಂತೆ ಮಾಡಲಾಗಿದೆ. ಗುಡ್ಡದಿಂದ ಇಳಿಜಾರು ಪ್ರದೇಶದಲ್ಲಿ ಹರಿದು ಹೋಗುತ್ತಿದ್ದ ನೀರನ್ನು ಸಂಗ್ರಹಿಸಲು ಸಮಾನಾಂತರ ಚರಂಡಿಗಳನ್ನು ನಿರ್ಮಿಸಲಾಗಿದೆ. ಚರಂಡಿಗಳ ಬದುವಿನಲ್ಲಿ ಗಿಡಗಳನ್ನು ನೆಡಲಾಗಿದೆ. ಇದರಿಂದ ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಇಲ್ಲಿವರೆಗೆ 2 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ಶಿವಾಜಿ ನೆಟ್ಟಿದ್ದಾರೆ ಎಂಬುದು ಗಮನಾರ್ಹ.
ಭೂಮಿಯ ನೀರಿನ ಸೆಲೆಗಳು, ಮನುಷ್ಯನ ರಕ್ತನಾಳಗಳಿದ್ದಂತೆ:ಶಿವಾಜಿ ಕಾಗಣಿಕರ್ ಅವರು ಜಲಕ್ರಾಂತಿ ಬಗ್ಗೆ ವಿವರಿಸುತ್ತಾ,ಗುಡ್ಡದ ಮೇಲೆ ಹತ್ತು ಅಡಿಗಳಿಗೆ ಒಂದರಂತೆ ಸಮಾನಂತರವಾಗಿ ಚರಂಡಿಗಳನ್ನು ನಿರ್ಮಿಸಿದೆವು. ಮಳೆ ನೀರು ಆ ಚರಂಡಿಗಳಲ್ಲೇ ಇಂಗುವಂತೆ ಮೂರು ವರ್ಷ ಮಾಡಿದ ನಂತರ, ಒಂದು ಕೆರೆ ನಿರ್ಮಿಸಿದೆವು. ಚರಂಡಿಗಳಲ್ಲಿ ಇಂಗಿದ ನೀರು ಕೆರೆ ಸೇರಿತು. ಮನುಷ್ಯನ ದೇಹದಲ್ಲಿ ಯಾವ ರೀತಿ ರಕ್ತನಾಳಗಳಿವೆಯೋ ಅದೇ ರೀತಿ ಭೂಮಿಯಲ್ಲೂ ನೀರಿನ ಸೆಲೆಗಳಿವೆ. ಹಾಗಾಗಿ, ಆ ಸೆಲೆಗಳ ಮೂಲಕ ಕೆರೆ, ಬಾವಿಗೆ ನೀರು ಹರಿದು ಬಂತು. ಆ ಬಳಿಕ ಈ ನಾಲ್ಕು ಗ್ರಾಮಗಳಲ್ಲಿ ಜನರು ಕೊರೆಸಿದ ಬಾವಿ, ಕೊಳವೆ ಭಾವಿಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಿಕ್ಕಿದ್ದು, ನೀರಿನ ಸಮಸ್ಯೆ ಬಗೆಹರಿಯಿತು ಎಂದರು.