ಬೆಂಗಳೂರು:ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ)ನಿವೇಶನ ಹಂಚಿಕೆ ಅಕ್ರಮದ ಕುರಿತು ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳ ತನಿಖೆ ಮುಂದುವರೆದಿದೆ. ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಬಿಲ್ಡರ್ ಹಾಗೂ ಡೆವಲಪರ್ ಎನ್.ಮಂಜುನಾಥ್ ಅವರ ಮನೆಯಲ್ಲಿ ಇಂದು ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದರು.
ಎನ್.ಕಾರ್ತಿಕ್ ಡೆವಲಪರ್ ಮಾಲೀಕರಾಗಿರುವ ಮಂಜುನಾಥ್, ಮೈಸೂರಿನಲ್ಲಿ ಕಾರ್ತಿಕ್ ಬಡಾವಣೆ ಹೆಸರಲ್ಲಿ ಲೇಔಟ್ ನಿರ್ಮಾಣ ಮಾಡಿದ್ದರು. 50:50ರ ಅನುಪಾತದಲ್ಲಿ ನಿವೇಶನ ಹಂಚಿಕೆ ವೇಳೆ ಅಧಿಕಾರಿಗಳಿಗೆ ಲಂಚ ನೀಡಿದ್ದ ಆರೋಪ ಇವರ ವಿರುದ್ಧ ಕೇಳಿಬಂದಿತ್ತು.
ನಿವೇಶನ ಹಂಚಿಕೆಯಲ್ಲಿನ ಅಕ್ರಮದ ಕುರಿತು ತನಿಖೆ ನಡೆಸುತ್ತಿರುವ ಇ.ಡಿ., ಇಂದು ಬೆಳಿಗ್ಗೆ ಬೆಂಗಳೂರಿನ ಬಾಣಸವಾಡಿಯ ದೀಪಿಕಾ ರಾಯಲ್ ಅಪಾರ್ಟ್‌ಮೆಂಟ್‌ನಲ್ಲಿರುವ ದಿನೇಶ್ ಕುಮಾರ್ ಅವರ ಮನೆ ಮೇಲೆ ದಾಳಿ ಮಾಡಿದರು. ಈ ಸಂದರ್ಭದಲ್ಲಿ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.
ಮುಡಾದ ನಿರ್ಗಮಿತ ಆಯುಕ್ತ ನಟೇಶ್ ಅವರ ಮಲ್ಲೇಶ್ವರಂ 10ನೇ ಕ್ರಾಸ್‌ನಲ್ಲಿರುವ ನಿವಾಸದ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು, ಬೆಳಿಗ್ಗೆ 8 ಗಂಟೆಯಿಂದ ಶೋಧ ಕೈಗೊಂಡಿದ್ದಾರೆ.
ಇದನ್ನೂ ಓದಿ:ಮುಡಾ ಹಿಂದಿನ ಇಬ್ಬರು ಆಯುಕ್ತರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿ: ಸ್ನೇಹಮಯಿ ಕೃಷ್ಣ