ಕರ್ನಾಟಕ

karnataka

ETV Bharat / state

ದಸರಾ ಗಜಪಡೆಗೆ ಮೊದಲ ತಾಲೀಮು: ಗಂಭೀರ ಹೆಜ್ಜೆ ಹಾಕಿದ ಅಭಿಮನ್ಯು ಆ್ಯಂಡ್ ಟೀಂ - Elephants Begins Dasara Rehearsal - ELEPHANTS BEGINS DASARA REHEARSAL

ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 8 ಆನೆಗಳು ಭಾನುವಾರ ಜಂಬೂ ಸವಾರಿ ಮಾರ್ಗದಲ್ಲಿ ಮೊದಲ ತಾಲೀಮನ್ನು ಯಶಸ್ವಿಯಾಗಿ ನಡೆಸಿ, ದಸರಾ ಚಟುವಟಿಕೆ ಗರಿಗೆದರುವಂತೆ ಮಾಡಿವೆ.

elephants-begins-rehearsal
ಅಭಿಮನ್ಯು ಹಾಗೂ ಇತರ ಆನೆಗಳ ತಾಲೀಮು (ETV Bharat)

By ETV Bharat Karnataka Team

Published : Aug 25, 2024, 9:30 PM IST

ಮೈಸೂರು:ಗಜಪಡೆ ನಾಯಕ ಅಭಿಮನ್ಯು ನೇತೃತ್ವದಲ್ಲಿ 8 ದಸರಾ ಆನೆಗಳು ಭಾನುವಾರ ಜಂಬೂಸವಾರಿ ಮಾರ್ಗದಲ್ಲಿ ಮೊದಲ ತಾಲೀಮನ್ನು ಯಶಸ್ವಿಯಾಗಿ ನಡೆಸಿದವು.

ಈ ಸಾಲಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೊದಲ ತಂಡದಲ್ಲಿ 9 ಆನೆಗಳು ಆಗಮಿಸಿವೆ. ಇದೇ ಮೊದಲ ಬಾರಿಗೆ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ 8 ಆನೆಗಳು ತಾಲೀಮು ನಡೆಸಿ, ದಸರಾ ಚಟುವಟಿಕೆ ಗರಿಗೆದರುವಂತೆ ಮಾಡಿದವು. ಭಾನುವಾರದಿಂದ ಮೊದಲ ತಂಡಕ್ಕೆ ತಾಲೀಮು ಆರಂಭಿಸಲಾಯಿತು.

ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗದಿಂದ ಬೆಳಗ್ಗೆ 7.03ಕ್ಕೆ ತಾಲೀಮು ಆರಂಭಿಸಲು ಕಾಲ್ನಡಿಗೆ ಆರಂಭಿಸಿದ ಅಭಿಮನ್ಯು ನೇತೃತ್ವದ ಗಜಪಡೆ, ಬಲರಾಮ ದ್ವಾರದಿಂದ ಹೊರಬಂದು ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆಯಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆ, ಹಳೇ ಆರ್​ಎಂಸಿ ವೃತ್ತ, ಬಂಬೂಬಜಾರ್ ವೃತ್ತ, ಹೈವೇ ವೃತ್ತ, ನೆಲ್ಸನ್ ಮಂಡೇಲಾ ರಸ್ತೆಯ ಮೂಲಕ ಬನ್ನಿಮಂಟಪದ ಪಂಜಿನ ಕವಾಯತು ಮೈದಾನವನ್ನು ಬೆಳಗ್ಗೆ 8.25ಕ್ಕೆ ತಲುಪಿತು.

ಮಾರ್ಗದುದ್ದಕ್ಕೂ 3 ಕಡೆ ಲದ್ದಿ ಹಾಕಲು ಎರಡು ನಿಮಿಷ ವಿರಮಿಸಿದ ಆನೆಗಳು, ನಂತರ ಯಾವುದೇ ಅಡೆತಡೆ, ಅಳುಕಿಲ್ಲದೆ ಸರಾಗವಾಗಿ ಸಾಗಿ ಗಮನ ಸೆಳೆದವು. ಗಜಪಡೆಯ ನಾಯಕ ಆನೆ ಅಭಿಮನ್ಯು ನೇತೃತ್ವದಲ್ಲಿ ಭೀಮ, ಗೋಪಿ, ಧನಂಜಯ, ರೋಹಿತ, ಲಕ್ಷ್ಮಿ, ವರಲಕ್ಷ್ಮಿ ಮತ್ತು ಏಕಲವ್ಯ ಆನೆಗಳು ಜಂಬೂಸವಾರಿ ಮಾರ್ಗದಲ್ಲಿ ಹೆಜ್ಜೆ ಹಾಕಿದವು.

ಆನೆಗಳ ಮುಂದೆ ಹಾಗೂ ಹಿಂದೆ ಪೊಲೀಸ್ ಬೆಂಗಾವಲು ವಾಹನ ತೆರಳುವ ವ್ಯವಸ್ಥೆ ಮಾಡಲಾಗಿತ್ತು. ಅರಣ್ಯ ಸಿಬ್ಬಂದಿ, ಆನೆಗಳ ಉಸ್ತುವಾರಿ ಸಿಬ್ಬಂದಿ, ಆನೆಯ ಪಕ್ಕದಲ್ಲೇ ಸಾಗುವ ಮೂಲಕ ಅಪರಿಚಿತರು ಆನೆಗಳ ಬಳಿ ಬರದಂತೆ ನೋಡಿಕೊಂಡರು. ತಾಲೀಮು ಮುಗಿದ ಬಳಿಕ ಬನ್ನಿಮಂಟಪದ ಮೈದಾನದಲ್ಲಿ ಕೆಲ ಕಾಲ ವಿರಮಿಸಿದ ಆನೆಗಳು ಮತ್ತೆ ಅದೇ ಮಾರ್ಗದಲ್ಲಿ ಸಾಗಿ ಅರಮನೆ ತಲುಪಿದವು.

ಕಂಜನ್ ಆನೆಗೆ ವಿಶ್ರಾಂತಿ:ಅನಾರೋಗ್ಯದಿಂದಾಗಿ ಕಾಲು ನೋವಿನ ಬಾಧೆಗೆ ಒಳಗಾಗಿರುವ ಕಂಜನ್ ಆನೆಗೆ ಇಂದು ವಿಶ್ರಾಂತಿ ನೀಡಲಾಗಿತ್ತು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಫ್ (ವನ್ಯಜೀವಿ) ಡಾ.ಪ್ರಭುಗೌಡ, ''ಈ ಬಾರಿಯ ದಸರಾ ಗಜಪಡೆಯ ಮೊದಲ ತಂಡದ 9 ಆನೆಗಳಲ್ಲಿ ಕಂಜನ್ ಆನೆಯನ್ನು ಹೊರತುಪಡಿಸಿ, 8 ಆನೆಗಳಿಗೆ ಇಂದು ಮೊದಲ ದಿನದ ತಾಲೀಮು ಯಶಸ್ವಿಯಾಗಿ ನಡೆಸಲಾಗಿದೆ. ಹಂತ - ಹಂತವಾಗಿ ಆನೆಗಳಿಗೆ ಭಾರ ಹೊರಿಸುವ ತರಬೇತಿಯನ್ನೂ ನೀಡಲಾಗುತ್ತದೆ. ಹೊಸ ಆನೆಗಳಾದ ಏಕಲವ್ಯ, ರೋಹಿತ ಆನೆಯ ವರ್ತನೆ ಭರವಸೆ ಮೂಡಿಸಿದೆ. ಅವುಗಳು ಪ್ರಬುದ್ಧವಾಗಿ ವರ್ತಿಸುತ್ತಿವೆ. ಇದನ್ನು ಕಂಡರೆ ಆಶ್ಚರ್ಯವಾಗುತ್ತದೆ. ಇದು ಆಶಾದಾಯಕ ಬೆಳವಣಿಗೆ. ಗಜಪಡೆಯ ಆರೋಗ್ಯ ಕುರಿತು ಹೆಚ್ಚಿನ ಗಮನ ನೀಡಲಾಗಿದೆ'' ಎಂದರು.

ಇದನ್ನೂ ಓದಿ :ದಸರಾ ಗಜಪಡೆಯ ತೂಕ ಪರೀಕ್ಷೆ: ಅಂಬಾರಿ ಹೊರುವ ಅಭಿಮನ್ಯು ಬಲಾಢ್ಯ, ಯಾವ ಆನೆ ಭಾರ ಎಷ್ಟು? - Dasara Gajapade weight test

ABOUT THE AUTHOR

...view details