ಕರ್ನಾಟಕ

karnataka

ETV Bharat / state

ಬಿಲ್‌ ಪಾವತಿಸದಿದ್ದರೆ ಕರೆಂಟ್ ಕಟ್​​: ಅ.1ರಿಂದಲೇ ನಿಯಮ ಜಾರಿ - Hescom Rule - HESCOM RULE

ನಿಗದಿತ ಸಮಯದಲ್ಲಿ ಬಿಲ್ ಪಾವತಿಸದಿದ್ದರೆ ಅಕ್ಟೋಬರ್ 1ರಿಂದ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಹೆಸ್ಕಾಂ ತಿಳಿಸಿದೆ.

ಹೆಸ್ಕಾಂ
ಹೆಸ್ಕಾಂ (ETV Bharat)

By ETV Bharat Karnataka Team

Published : Sep 28, 2024, 10:51 AM IST

ಹುಬ್ಬಳ್ಳಿ: ವಿದ್ಯುತ್ ಬಿಲ್‌ ನೀಡಿದ ನಂತರದ 30 ದಿನಗಳೊಳಗೆ ಬಿಲ್‌ ಪಾವತಿಸದಿದ್ದಲ್ಲಿ ನಿಯಮಾವಳಿ ಅನ್ವಯ ಗ್ರಾಹಕರ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಅಕ್ಟೋಬರ್ 1ರಿಂದಲೇ ಈ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಗೃಹ ಮತ್ತು ವಾಣಿಜ್ಯ ಬಳಕೆದಾರರು, ಅಪಾರ್ಟ್‌ಮೆಂಟ್‌ಗಳು ಹಾಗೂ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆದ ಗ್ರಾಹಕರು ನಿಗದಿತ 30 ದಿನದೊಳಗೆ ಬಿಲ್‌ ಪಾವತಿಸಬೇಕು. ಇಲ್ಲದಿದ್ದಲ್ಲಿ ಮೀಟರ್‌ ರೀಡಿಂಗ್‌ಗೆ ಬರುವ ದಿನ ಅಂದರೆ ಪ್ರತಿ ತಿಂಗಳ ಮೊದಲ 15 ದಿನದಲ್ಲೇ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು. ಹಾಗಾಗಿ, ಗ್ರಾಹಕರು ಸಕಾಲದಲ್ಲಿ ಶುಲ್ಕ ಪಾವತಿಸುವಂತೆ ಹೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.

ಈವರೆಗೆ, ಪ್ರತಿ ತಿಂಗಳ ಮೊದಲ 15 ದಿನದಲ್ಲಿ ಮೀಟರ್‌ ಓದಿದ ಬಳಿಕ, ಬಿಲ್‌ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಲು ಲೈನ್‌ಮೆನ್‌ಗಳ ಜತೆ ಮಾಪಕ ಓದುಗರು ತೆರಳುತ್ತಿದ್ದರು. ಇನ್ನುಮುಂದೆ ಮಾಪಕ ಓದುಗರೊಂದಿಗೆ ಲೈನ್‌ಮೆನ್‌ಗಳು ತೆರಳಲಿದ್ದಾರೆ. ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಬಿಲ್ ನೀಡುವ ಸಮಯದಲ್ಲಿಯೇ ವಿದ್ಯುತ್ ಸಂಪರ್ಕವನ್ನೂ ಸ್ಥಗಿತಗೊಳಿಸಲಿದ್ದಾರೆ. ವಿದ್ಯುತ್ ಬಿಲ್ ಪಾವತಿಗೆ ಯಾವುದೇ ಬಡ್ಡಿಯಿಲ್ಲದೆ 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಆ ನಂತರವೂ ಬಡ್ಡಿ ಸಹಿತ ಪಾವತಿಗೆ 15 ದಿನಗಳ ಕಾಲಾವಕಾಶ ಇರುತ್ತದೆ. ಆದರೂ ಗ್ರಾಹಕರು ಬಿಲ್ ಪಾವತಿಸದಿದ್ದಲ್ಲಿ ಮುಂದಿನ ಮೀಟರ್ ರೀಡಿಂಗ್ ದಿನವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂದು ತಿಳಿಸಿದೆ.

ವಿದ್ಯುತ್ ಬಾಕಿ ಮೊತ್ತ ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ 100 ರೂ.ಗಳಿಗಿಂತ ಅಧಿಕವಾಗಿದ್ದಲ್ಲಿ ಅಂತಹ ಗ್ರಾಹಕರ ವಿದ್ಯುತ್ ಸಂಪರ್ಕವನ್ನು ಸಹ ಕಡಿತಗೊಳಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ರಸೀದಿ ಹಾಜರು ಪಡಿಸಲು ಸೂಚನೆ: ಆನ್‌ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಸಿದ ಸಂದರ್ಭದಲ್ಲಿ ಕೆಲವೊಮ್ಮೆ ಹೆಸ್ಕಾಂ ತಂತ್ರಾಂಶದಲ್ಲಿ (ಸಾಫ್ಟ್‌ವೇರ್‌) ತಾಂತ್ರಿಕ ದೋಷದಿಂದಾಗಿ ವಿವರ ನಮೂದಾಗದೇ ಇದ್ದಾಗ, ಹಿಂದಿನ ಬಿಲ್ ಮೊತ್ತವನ್ನು ತೋರಿಸುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಹೆಸ್ಕಾಂ ಸಿಬ್ಬಂದಿಗೆ ಆನ್‌ಲೈನ್‌ನಲ್ಲಿ ಬಿಲ್ ಪಾವತಿಸಿದ ರಸೀದಿ ತೋರಿಸಿದರೆ ವಿದ್ಯುತ್ ಕಡಿತ ಮಾಡುವುದಿಲ್ಲ ಎಂದು ಹೆಸ್ಕಾಂ ತಿಳಿಸಿದೆ.

ಹುಬ್ಬಳ್ಳಿಯಲ್ಲಿ ವಿದ್ಯುತ್ ವ್ಯತ್ಯಯ:ಇಲ್ಲಿನ ತಾರಿಹಾಳದ 110 ಕೆ.ವಿ.ವಿದ್ಯುತ್ ಉಪಕೇಂದ್ರ ಮತ್ತು ಕೆಐಎಡಿಬಿ ಗಾಮನಗಟ್ಟಿ 110 ಕೆ.ವಿ. ವಿದ್ಯುತ್ ಉಪಕೇಂದ್ರದಲ್ಲಿ 4 ನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ಸೆ.29 ರಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ನಗರದ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ತಾರಿಹಾಳ ಕೈಗಾರಿಕಾ ಪ್ರದೇಶ ಸ್ಟೇಜ್-1 ಮತ್ತು 2, ತಾರಿಹಾಳ, ಕೆಐಎಡಿಬಿ ಸ್ಟೇಜ್-1 ಮತ್ತು 2, ಗಾಮನಗಟ್ಟಿ ಕೈಗಾರಿಕಾ ಪ್ರದೇಶ, ಕೆಎಸ್‌ಎಸ್‌ಐಡಿಸಿ ಕೈಗಾರಿಕಾ ಪ್ರದೇಶ, ಜೋಡಳ್ಳಿ ಕ್ರಾಸ್‌ನ ಫೈಜರ್ ಇಂಡಿಯಾ ಲಿಮಿಟೆಡ್, ಶಿರೂರ ಪಾರ್ಕ್, ರೆವಡಿಹಾಳ, ಪರಸಾಪುರ, ದೇವರಗುಡಿಹಾಳ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.

ಇದನ್ನೂ ಓದಿ:ಯತ್ನಾಳ್​ ​ವಿರುದ್ಧದ ಕೇಸ್​ ರದ್ದು; ಬಿಎನ್‌ಎಸ್‌ಎಸ್ ಅಡಿಯಲ್ಲಿ ಹೈಕೋರ್ಟ್​ನಿಂದ ಮೊದಲ ತೀರ್ಪು - High Court

ಇದನ್ನೂ ಓದಿ:ಆಟವಾಡುತ್ತಿದ್ದಾಗ ಮಕ್ಕಳ ಕೈಗೆ ಸಿಕ್ತು 1,000 ವರ್ಷಗಳಷ್ಟು ಹಳೆಯದಾದ ಈಳಂ ನಾಣ್ಯ: ಏನಿದರ ಐತಿಹಾಸಿಕ ವಿಶೇಷತೆಗಳು! - Rajarajan Coins Found

ABOUT THE AUTHOR

...view details